ನವದೆಹಲಿ: ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಕೇಜ್ರಿವಾಲ್ ಸರ್ಕಾರದ ವಿರುದ್ಧ ಕಠಿಣ ಕ್ರಮ ಕೈಗೊಂಡಿದ್ದಾರೆ. ದೆಹಲಿ ಸರ್ಕಾರದ ಹೊಸ ಅಬಕಾರಿ ನೀತಿ ಬಗ್ಗೆ ಎಲ್‌ಜಿ ವಿನಯ್ ಕುಮಾರ್ ಸಕ್ಸೇನಾ ಸಿಬಿಐ ತನಿಖೆಗೆ ಶಿಫಾರಸು ಮಾಡಿದ್ದಾರೆ ಹೊಸ ಅಬಕಾರಿ ನೀತಿಯಲ್ಲಿನ ನಿಯಮಗಳನ್ನು ನಿರ್ಲಕ್ಷಿಸಿ, ತಮಗೆ ಬೇಕಾದಂತೆ ಟೆಂಡರ್ ನೀಡಲಾಗಿದೆ ಎಂದು ಆರೋಪಿಸಲಾಗಿದೆ. ಮುಖ್ಯ ಕಾರ್ಯದರ್ಶಿಯವರ ವರದಿ ಬಳಿಕ ಎಲ್‌ಜಿ ವಿನಯ್ ಕುಮಾರ್ ಸಕ್ಸೇನಾ ಈ ಕ್ರಮ ಕೈಗೊಂಡಿದ್ದಾರೆ.
ಕಳೆದ ವರ್ಷ ದೆಹಲಿ ಸರ್ಕಾರ ಮದ್ಯ ಮಾರಾಟಕ್ಕೆ ಹೊಸ ಅಬಕಾರಿ ನೀತಿಯನ್ನು ಜಾರಿಗೆ ತಂದಿತ್ತು. ಈ ನೀತಿಯ ಅಡಿ ಎಲ್ಲ ಮದ್ಯದಂಗಡಿಗಳ ಪರವಾನಗಿಯನ್ನು ರದ್ದುಗೊಳಿಸಲಾಗಿದೆ. ಹೊಸ ನೀತಿಯಿಂದ ಖಾಸಗಿಯವರಿಗೆ ಹೊಸ ಟೆಂಡರ್ ಮೂಲಕ ಮದ್ಯದಂಗಡಿ ತೆರೆಯಲು ಅವಕಾಶ ಕಲ್ಪಿಸಲಾಗಿದೆ. ಈ ಬಗ್ಗೆ ಪ್ರತಿಪಕ್ಷಗಳು ಪ್ರಶ್ನೆಗಳನ್ನು ಎತ್ತಿದ್ದವು. ಬಿಜೆಪಿ ನಾಯಕರು ಈ ಸಂಬಂಧ ಹಲವು ಬಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ..
ಹೊಸ ಅಬಕಾರಿ ನೀತಿಯಡಿ ಪ್ರತಿ ವಾರ್ಡ್‌ನಲ್ಲಿ ನಾಲ್ಕು ಮದ್ಯದಂಗಡಿ ತೆರೆಯಲು ಅವಕಾಶವಿದೆ. ಇದರ ಅಡಿ ಮದ್ಯದಂಗಡಿ ತೆರೆದ ಪ್ರದೇಶಗಳಲ್ಲಿನ ಸ್ಥಳೀಯರು ಇದನ್ನು ತೀವ್ರವಾಗಿ ವಿರೋಧಿಸಿದರು. ದೆಹಲಿಯ ಹಲವು ಪ್ರದೇಶಗಳಲ್ಲಿ ಹೊಸ ನೀತಿಯ ಅಡಿ ತೆರೆಯಲಾದ ಮದ್ಯದ ಅಂಗಡಿಗಳನ್ನು ಮಹಿಳೆಯರು ವಿರೋಧಿಸುತ್ತಿದ್ದಾರೆ. ವಿಷಯ ಲೆಫ್ಟಿನೆಂಟ್ ಗವರ್ನರ್‌ಗೆ ತಲುಪಿದ್ದು, ಈಗ ಸಿಬಿಐ ತನಿಖೆಗೆ ಆದೇಶಿಸಿದ್ದಾರೆ.
ಇದನ್ನೂ ಓದಿ: ಪರಮಾಣು ಬಾಂಬ್ ತಯಾರಿಸಬಹುದಾದ 2 ಕೆಜಿ ಯುರೇನಿಯಂ ವಶ: ತಪ್ಪಿದ ಅನಾಹುತ
ದೆಹಲಿ ಸರ್ಕಾರ ಕಳೆದ ವರ್ಷ ನವೆಂಬರ್ 17 ರಂದು ಹೊಸ ಅಬಕಾರಿ ನೀತಿಯನ್ನು ಜಾರಿಗೆ ತಂದಿದೆ. ಈ ನೀತಿಯಡಿ ನಗರದಾದ್ಯಂತ 849 ಮದ್ಯದಂಗಡಿಗಳನ್ನು ತೆರೆಯಲು ಅನುಮತಿ ನೀಡಲಾಗಿದೆ. ಈ ಪೈಕಿ ಈವರೆಗೆ ಸುಮಾರು 600 ಮದ್ಯದಂಗಡಿಗಳನ್ನು ತೆರೆಯಲಾಗಿದೆ. ಹೊಸದಾಗಿ ತೆರೆದಿರುವ ಈ ಎಲ್ಲ ಮದ್ಯದಂಗಡಿಗಳ ಪಟ್ಟಿಯನ್ನು ಅಬಕಾರಿ ಇಲಾಖೆಯ ಅಧಿಕೃತ ವೆಬ್‌ಸೈಟ್‌ನಲ್ಲಿ ಅಪ್ಲೋಡ್ ಮಾಡಲಾಗಿದೆ.
ದೆಹಲಿ ಸರ್ಕಾರದ ಹೊಸ ಅಬಕಾರಿ ನೀತಿಯ ಅಡಿ ಇಡೀ ನಗರದಲ್ಲಿ ಮದ್ಯದ ವ್ಯಾಪಾರವನ್ನು ಈಗ ಖಾಸಗಿ ವಲಯದ ವ್ಯಾಪಾರಿಗಳಿಗೆ ಹಸ್ತಾಂತರಿಸಲಾಗಿದೆ. ಅಲ್ಲಿ ಅವರು ಕನಿಷ್ಠ 500 ಚದರ ಮೀಟರ್ ಪ್ರದೇಶದಲ್ಲಿ ದೊಡ್ಡ ಮದ್ಯದಂಗಡಿ ನಿರ್ಮಿಸಬಹುದಾಗಿದೆ.