ನವದೆಹಲಿ: ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ) ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ಅವರನ್ನು ಇಂದು (ಮಂಗಳವಾರ) ದೆಹಲಿಯ ಪಟಿಯಾಲ ಹೌಸ್ ಕೋರ್ಟ್‌ಗೆ ಹಾಜರುಪಡಿಸಿತು. 2022 ರಲ್ಲಿ, ಎನ್ಐಎ ಬಿಷ್ಣೋಯ್ ವಿರುದ್ಧ ಕ್ರಿಮಿನಲ್ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ) ಅಡಿಯಲ್ಲಿ ಪ್ರಕರಣ ದಾಖಲಿಸಿತ್ತು. ಈ ಪ್ರಕರಣ ಸಂಬಂಧ ವಿಚಾರಣೆಗಾಗಿ ಎನ್‌ಐಎ ಪ್ರೊಡಕ್ಷನ್ ವಾರಂಟ್ ಮೇಲೆ ಇಂದು ಪಂಜಾಬ್‌ನ ಬಟಿಂಡಾ ಜೈಲಿನಿಂದ ಬಿಷ್ಣೋಯ್ಯನ್ನು ದೆಹಲಿಗೆ ಕರೆತಂದಿದೆ.
ಪ್ರಕರಣದ ವಿಚಾರಣೆ ನಡೆಸಿದ ಪಟಿಯಾಲ ಹೌಸ್ ಕೋರ್ಟ್ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಶೈಲೇಂದ್ರ ಶರ್ಮಾ, ಲಾರೆನ್ಸ್ ಬಿಷ್ಣೋಯ್ಯನ್ನು 7 ದಿನಗಳ ಕಾಲ ಎನ್‌ಐಎ ಕಸ್ಟಡಿಗೆ ಒಪ್ಪಿಸಿತು. ಇದೇ ವೇಳೆ ಪ್ರಕರಣವನ್ನು ವಿಶೇಷ ಎನ್‌ಐಎ ನ್ಯಾಯಾಲಯಕ್ಕೆ ವರ್ಗಾಯಿಸಿದ್ದಾರೆ. ಜೊತೆಗೆ ಬಿಷ್ಣೋಯ್ಗೆ ಕಟುನಿಟ್ಟಿನ ಭದ್ರತೆ ನೀಡುವಂತೆ ರಾಷ್ಟ್ರೀಯ ತನಿಖಾ ಸಂಸ್ಥೆಗೆ ಸೂಚನೆ ನೀಡಿದ್ದಾರೆ. ಇದರ ಬೆನ್ನಲ್ಲೇ ಎನ್‌ಐಎ, ಬಿಷ್ಣೋಯ್ ವಿರುದ್ಧ ಮತ್ತೊಂದು ಪ್ರಕರಣವನ್ನೂ ದಾಖಲಿಸಿದೆ.
ಬಿಷ್ಣೋಯಿಯನ್ನು ವಿಚಾರಣೆಗಾಗಿ ದೆಹಲಿಗೆ ಕರೆತರಲು ಎನ್‌ಐಎ ಜೊತೆಗೆ ಪಂಜಾಬ್ ಪೊಲೀಸರ ತಂಡವೂ ಆಗಮಿಸಿತ್ತು. ಲಾರೆನ್ಸ್ ಬಿಷ್ಣೋಯ್ ವಿರುದ್ಧ ದೆಹಲಿ, ಪಂಜಾಬ್, ಹರಿಯಾಣ, ರಾಜಸ್ಥಾನ, ಚಂಡೀಗಢ ಸೇರಿದಂತೆ ಹಲವು ರಾಜ್ಯಗಳಲ್ಲಿ ಒಟ್ಟು 36ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ.
ಬಿಷ್ಣೋಯ್ ಪರ ವಕೀಲ ವಿಶಾಲ್ ಚೋಪ್ರಾ ಮಾತನಾಡಿ, ಏಳು ದಿನಗಳೊಳಗೆ ಬಿಷ್ಣೋಯ್ ವಿರುದ್ಧ ಸಾಕ್ಷ್ಯಾಧಾರಗಳನ್ನು ಸಲ್ಲಿಸುವಂತೆ ನ್ಯಾಯಾಲಯ ಎನ್‌ಐಎಗೆ ಸೂಚಿಸಿದೆ. ನ್ಯಾಯಾಂಗ ಬಂಧನದ ಅವಧಿಯಲ್ಲಿ ಬಿಷ್ಣೋಯಿ ಪರ ವಕೀಲರು ಪ್ರತಿದಿನ ಅರ್ಧಗಂಟೆ ಅವರನ್ನು ಭೇಟಿ ಮಾಡಲು ಎನ್‌ಎಐಎ ಕಚೇರಿಗೆ ಬರಬಹುದು ಎಂದು ನಿರ್ದೇಶಿಸಿದೆ ಎಂದು ತಿಳಿಸಿದರು.
ಇದನ್ನೂ ಓದಿ: ಅತೀಕ್ ಅಹ್ಮದ್ ಪರ ವಕೀಲ ದಯಾಶಂಕರ್ ಮಿಶ್ರಾ ಮನೆ ಬಳಿ ಕಚ್ಚಾ ಬಾಂಬ್ ಸ್ಫೋಟ