ಲಖನೌ: ಲಖೀಂಪುರ ಖೇರಿ ಪ್ರಕರಣ ಯುಪಿ ವಿಧಾನಸಭೆಯಲ್ಲೂ ಪ್ರತಿಧ್ವನಿಸಿದ್ದು, ಕಲಾಪದೊಳಗೆ ಹಾಗೂ ಹೊರಗಡೆ ಕಾಂಗ್ರೆಸ್ ಶಾಸಕರು ಪ್ರತಿಭಟನೆ ನಡೆಸಿದ್ದು, ಕೇಂದ್ರ ಸಚಿವ ಅಜಯ್ ಮಿಶ್ರಾ ಟೆನಿ ಅವರನ್ನ ವಜಾ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಉತ್ತರ ಪ್ರದೇಶ ಕಾಂಗ್ರೆಸ್ ಘಟಕದ ಮುಖ್ಯಸ್ಥ ಹಾಗೂ ಶಾಸಕ ಅಜಯ್ ಕುಮಾರ್ ಲಲ್ಲು ಮಾತನಾಡಿ, ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ರಾಜೀನಾಮೆ ನೀಡಬೇಕು ಎಂದು ವಿಧಾನಸೌಧದ ಒಳಗೂ ಒತ್ತಾಯಿಸುತ್ತೇವೆ ಎಂದರು. ಇದಕ್ಕೂ ಮುನ್ನ ಜಿಪಿಒ ಬಳಿಯ ಗಾಂಧಿ ಪ್ರತಿಮೆ ಸ್ಥಳದಿಂದ ಯುಪಿ ವಿಧಾನಸೌಧದ ಬಳಿ ವರೆಗೆ ನಡೆದ ಪ್ರತಿಭಟನಾ ರ‍್ಯಾಲಿಯಲ್ಲಿ ಅಜಯ್ ಕುಮಾರ್ ಭಾಗವಹಿಸಿದ್ದರು.
ಲಖೀಂಪುರ್ ಖೇರಿ ಪ್ರಕರಣದಲ್ಲಿ ತಮ್ಮ ಪುತ್ರ ಆಶೀಶ್ ವಿರುದ್ಧ ಚಾರ್ಚ್ ಶೀಟ್ ಬಗ್ಗೆ ನಿನ್ನೆ ಮಾಧ್ಯಮದವರು ಪ್ರಶ್ನೆ ಕೇಳುತ್ತಿದ್ದಂತೆ ಸಿಟ್ಟಾದ ಕೇಂದ್ರ ಸಚಿವ ಅಜಯ್ ಮಿಶ್ರಾ ಪತ್ರಕರ್ತರೊಬ್ಬರ ಮೇಲೆ ಹಲ್ಲೆಗೆ ಮುಂದಾಗಿದ್ದರು. ಈ ವೇಳೆ, ಸ್ಥಳದಲ್ಲಿದ್ದ ಜನರು ಅವರನ್ನು ತಡೆದಿದ್ದರು. ಉದ್ದೇಶ ಪೂರಕವಾಗಿ ಕಾರು ಹರಿಸಿ 8 ಮಂದಿಯ ಹತ್ಯೆ ಪ್ರಕರಣದಲ್ಲಿ ಅಜಯ್ ಮಿತ್ರಾ ಅವರ ಪುತ್ರ ಅಶೀಶ್ ಸೇರಿದಂತೆ 13 ಮಂದಿ ಆರೋಪಿಗಳನ್ನು ಎಸ್‌ಐಟಿ ಬಂಧಿಸಿದ್ದು, ಲಖೀಂಪುರ ಖೇರಿ ಹಿಂಸಾಚಾರ ಪ್ರಕರಣದ ತನಿಖೆ ಮುಂದುವರಿಸಿದೆ.
ಇದನ್ನೂ ಓದಿ: ಲಖೀಂಪುರ್ ಖೇರಿ ಹಿಂಸಾಚಾರ ಪೂರ್ವಯೋಜಿತ: ಆರೋಪಿಗಳ ವಿರುದ್ಧ ಹೊಸ ಸೆಕ್ಷನ್ ಸೇರಿಸಲು ಎಸ್‌ಐಟಿ ಅರ್ಜಿ