ಲಖನೌ(ಉತ್ತರ ಪ್ರದೇಶ): ಲಖಿಂಪುರ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಘಟನೆಯಲ್ಲಿ ಮೃತಪಟ್ಟ ಇಬ್ಬರು ಬಿಜೆಪಿ ಕಾರ್ಯಕರ್ತರು ಮತ್ತು ಕೇಂದ್ರ ಸಚಿವ ಅಜಯ್ ಕುಮಾರ್ ಮಿಶ್ರಾ ಅವರ ಕಾರು ಚಾಲಕನ ಕುಟುಂಬಗಳಿಗೆ ತಲಾ 45 ಲಕ್ಷ ರೂಪಾಯಿ ಪರಿಹಾರ ನೀಡಲಾಗುತ್ತದೆ.
ನಾಲ್ಕು ಮಂದಿ ರೈತರು ಸೇರಿದಂತೆ 8 ಮಂದಿ ಹಿಂಸಾಚಾರದಲ್ಲಿ ಸಾವನ್ನಪ್ಪಿದ್ದು, ಇದರಲ್ಲಿ ಓರ್ವ ಪತ್ರಕರ್ತ ಹಾಗೂ ಇಬ್ಬರು ಬಿಜೆಪಿ ಕಾರ್ಯಕರ್ತರೂ ಇದ್ದರು. ಮೃತಪಟ್ಟ ರೈತರು ಮತ್ತು ಪತ್ರಕರ್ತ ಕುಟುಂಬಗಳಿಗೆ ಈ ಮೊದಲೇ ಉತ್ತರ ಪ್ರದೇಶ ಸರ್ಕಾರದಿಂದ ಚೆಕ್ ವಿತರಣೆ ಮಾಡಲಾಗಿತ್ತು.
ಆರೋಪಿ ಇಂದು ಕೋರ್ಟ್ಗೆ ಹಾಜರು ಸಾಧ್ಯತೆ
ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಪ್ರತಿಭಟನಾನಿರತ ರೈತರ ಮೇಲೆ ಕಾರು ಹರಿದ್ದ ಎಂಬ ಆರೋಪವಿದ್ದು, ಆರೋಪಿಗೆ ತನಿಖೆಗೆ ಹಾಜರಾಗುವಂತೆ ಸಮನ್ಸ್ ನೀಡಲಾಗಿತ್ತು. ಆದರೆ ಅವರು ಶುಕ್ರವಾರ ಕೋರ್ಟ್ಗೆ ಹಾಜರಾಗಿಲ್ಲ.
ಇಂದು ಬೆಳಗ್ಗೆ 11 ಗಂಟೆಗೆ ಕೋರ್ಟ್ಗೆ ಹಾಜರಾಗಲು ಸೂಚನೆ ನೀಡಲಾಗಿದೆ. ಇಂದೂ ವಿಚಾರಣೆಗೆ ಹಾಜರಾಗದಿದ್ದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಉನ್ನತ ಮೂಲಗಳು ಮಾಹಿತಿ ನೀಡಿವೆ.
ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಮಂದಿಯ ವಿರುದ್ಧ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ. ಉತ್ತರ ಪ್ರದೇಶ ಸರ್ಕಾರ ಎಸ್ಐಟಿ ತನಿಖೆ ಆರಂಭಿಸಿರುವುದು ಮಾತ್ರವಲ್ಲದೇ, ನ್ಯಾಯಾಂಗ ಆಯೋಗವನ್ನು ರಚನೆ ಮಾಡಿ ತನಿಖೆ ನಡೆಸುತ್ತಿದೆ.
ಇದನ್ನೂ ಓದಿ: ಕಟ್ಟಡ ಕುಸಿತ: ಸೆಕ್ಯೂರಿಟಿ ಗಾರ್ಡ್ ಸಮಯ ಪ್ರಜ್ಞೆ... ಅವಶೇಷಗಳಡಿ ಸಿಕ್ಕ ಚಿನ್ನಾಭರಣಕ್ಕಾಗಿ ಹುಡುಕಾಟ