ಕೋಟಾ: ರಾಜಸ್ಥಾನದ ಕೋಟಾದಲ್ಲಿ 'ಭಾರತ್ ಜೋಡೋ ಯಾತ್ರೆ'ಯಲ್ಲಿ ಕುಲದೀಪ್ ಶರ್ಮಾ ಎಂಬಾತ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ. ವೀರ್ ಸಾವರ್ಕರ್ ಬಗ್ಗೆ ರಾಹುಲ್ ಗಾಂಧಿಯವರ ಹೇಳಿಕೆಯಿಂದ ಕೋಪಗೊಂಡ ಇವರು ಆತ್ಮಹತ್ಯೆಗೆ ಯತ್ನಿಸುವ ಮೊದಲು ವೀರ್ ಸಾವರ್ಕರ್ ಅವರ ಪೋಸ್ಟ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದರು.
ರಾಹುಲ್ ಗಾಂಧಿ ಹಲವು ಬಾರಿ ವೀರ ಸಾವರ್ಕರ್ ಗುರಿಯಾಗಿಸಿ ಟೀಕೆ ಮಾಡಿದ್ದಾರೆ. ಡಿಸೆಂಬರ್ 4 ರ ಸಂಜೆ ಜಲಾವರ್‌ನಲ್ಲಿ ಭಾರತ್ ಜೋಡೋ ಯಾತ್ರೆ ಪ್ರವೇಶಿಸಿದಾಗಲೂ ಸಾವರ್ಕರ್ ಅವರನ್ನು ತೆಗಳಿದ್ದಾರೆ ಎಂದು ಕೋಪಗೊಂಡ ಕುಲ್ದೀಪ್ ಶರ್ಮಾ ಅಂತಿಮವಾಗಿ ಗುರುವಾರ ಬೆಳಿಗ್ಗೆ 6 ಗಂಟೆಗೆ ತನ್ನ ಫೇಸ್ಬುಕ್ ಖಾತೆಯಲ್ಲಿ ಸಾವರ್ಕರ್ ಫೋಟೋವನ್ನು ಪೋಸ್ಟ್ ಮಾಡಿ ಹೇಳಿಕೆಯನ್ನು ಬರೆದುಕೊಂಡಿದ್ದಾರೆ.
ಇದಲ್ಲದೇ ಕೋಟಾದಲ್ಲಿ ಭಾರತ್ ಜೋಡೋ ಯಾತ್ರೆ ವೇಳೆ ಬೆಂಕಿ ಹಚ್ಚಿಕೊಂಡಿದ್ದು, ಅದರ ವಿಡಿಯೋ ಕೂಡ ಹೊರಬಿದ್ದಿದೆ. ಬೆಂಕಿ ಹಚ್ಚಿಕೊಂಡು ನಿರಂತರವಾಗಿ ರಾಹುಲ್ ಗಾಂಧಿ ವಿರುದ್ಧ ಘೋಷಣೆಗಳನ್ನು ಸಹ ಕೂಗಿದ್ದಾರೆ. ತಕ್ಷಣವೇ ಬೆಂಕಿ ನಂದಿಸಲು ಇತರರು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ.
ಈ ವೇಳೆ ಸ್ಥಳದಲ್ಲಿದ್ದ ಉಪ ಪೊಲೀಸ್ ವರಿಷ್ಠಾಧಿಕಾರಿ ಕೇಶೋರೈಪತನ್ ಅಂಕಿತ್ ಜೈನ್ ಅವರು ತರಾತುರಿಯಲ್ಲಿ ಸಮವಸ್ತ್ರ ತೆರೆದು ಬೆಂಕಿ ನಂದಿಸಿ ಕುಲದೀಪ್ ಅವರನ್ನು ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಿದರು. ನಂತರ ಪೊಲೀಸರು ಆಸ್ಪತ್ರೆಯಿಂದ ವಶಕ್ಕೆ ಪಡೆದುಕೊಂಡಿದ್ದಾರೆ.
ಕುಲದೀಪ್ ಶರ್ಮಾ ಮೂಲತಃ ಬುಂಡಿ ಜಿಲ್ಲೆಯ ನೈನ್ವಾ ನಿವಾಸಿಯಾಗಿದ್ದು, ಪ್ರಸ್ತುತ ಕೋಟಾ ನಗರದ ಬೋರ್ಖೇಡಾ ಪ್ರದೇಶದ ಪ್ರತಾಪ್ ನಗರದಲ್ಲಿ ವಾಸಿಸುತ್ತಿದ್ದಾರೆ. ಇವರಿಗೆ ಬಿಜೆಪಿ ಸಂಪರ್ಕವೂ ಇದ್ದು, ಕುಲದೀಪ್ ಅವರ ತಂದೆ ಗಿರ್ರಾಜ್ ಶರ್ಮಾ ಅವರು ಭಾರತೀಯ ಜನತಾ ಪಕ್ಷದೊಂದಿಗೆ ಸಂಬಂಧ ಹೊಂದಿದ್ದಾರೆ. ಅಲ್ಲದೇ ಬುಂದಿ ಜಿಲ್ಲೆಯ ನೈನ್ವಾ ನಗರದ ಪುರಸಭೆಯ ಅಧ್ಯಕ್ಷರಾಗಿದ್ದಾರೆ.
ಇದಲ್ಲದೇ ಕುಲದೀಪ್ ವಿಶ್ವ ಹಿಂದೂ ಪರಿಷತ್ತಿನೊಂದಿಗೆ ಸಹ ಸಂಬಂಧ ಹೊಂದಿದ್ದಾರೆ. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕ್ರಮಗಳಲ್ಲೂ ಭಾಗವಹಿಸುತ್ತಿದ್ದ. ಫಾರ್ಮಸಿ ಓದಿದ ಕುಲ್ದೀಪ್ ಪ್ರಸ್ತುತ ಕಂಪನಿಯೊಂದರಲ್ಲಿ ವೈದ್ಯಕೀಯ ಪ್ರತಿನಿಧಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಶಾಸಕ ಅಬ್ದುಲ್ಲಾ ಅಜಂ ಸೇರಿ 9 ಜನರ ಮೇಲೆ ಎಫ್ಐಆರ್ ದಾಖಲು