ಲಖನೌ: ಜೈಲು ಪಾಲಾಗಿರುವ ಮಾಜಿ ಬಿಜೆಪಿ ಶಾಸಕ ಕುಲ್ದೀಪ್ ಸೆಂಗಾರ್ ಅವರ ಪುತ್ರಿ ವಿಡಿಯೋ ಹೇಳಿಕೆಯೊಂದನ್ನು ನೀಡಿದ್ದು, ತನ್ನ ತಾಯಿ ಸಂಗೀತಾ ಸೆಂಗಾರ್ ಅವರಿಗೆ ಆಗಿರುವ ಅನ್ಯಾಯವನ್ನು ಪ್ರಶ್ನಿಸಿದ್ದಾರೆ.
ತನ್ನ ಹೆಸರನ್ನು ಎಲ್ಲೂ ಪ್ರಸ್ತಾಪಿಸದ ಆಕೆ, ಈ ಸಂದರ್ಭದಲ್ಲಿ, ಹೆಸರು ಅಪ್ರಸ್ತುತವಾಗುತ್ತದೆ, ನಾನು ನನ್ನ ಉಪನಾಮ ಸೆಂಗರ್ ಎಂಬುದನ್ನು ತಿಳಿಸಲು ಬಯಸುತ್ತೇನೆ. ತನ್ನ ತಾಯಿ ಸಂಗೀತಾ ಸೆಂಗಾರ್ ಅವರಿಗೆ ಈ ಹಿಂದೆ ಉನ್ನಾವೊದಲ್ಲಿ ನಡೆದ ಪಂಚಾಯತ್ ಚುನಾವಣೆಗೆ ಬಿಜೆಪಿ ಟಿಕೆಟ್ ನೀಡಿತ್ತು. ಆದರೆ, ಮಾಧ್ಯಮಗಳು ಈ ಬಗ್ಗೆ ಪ್ರಶ್ನೆಗಳನ್ನು ಎತ್ತಿದ ನಂತರ ಅದನ್ನು ಹಿಂಪಡೆಯಲಾಯಿತು.
ನನ್ನ ತಾಯಿ ಕಳೆದ 15 ವರ್ಷಗಳಿಂದ ಸಕ್ರಿಯ ರಾಜಕೀಯದಲ್ಲಿದ್ದಾರೆ. ಅವರು ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದಿದ್ದಾರೆ. ಅಲ್ಲದೇ ಜಿಲ್ಲಾ ಪಂಚಾಯತ್ ಅಧ್ಯಕ್ಷರೂ ಆಗಿದ್ದರು. ಅವರು ಪ್ರಾಮಾಣಿಕತೆ ಮತ್ತು ಸಮಗ್ರತೆಗೆ ಹೆಸರುವಾಸಿಯಾಗಿದ್ದಾರೆ. ಆದರೆ, ಈಗ ಅವರ ಸಾಮರ್ಥ್ಯವನ್ನು ಬದಿಗಿರಿಸಲಾಗಿದೆ. ಮಹಿಳೆಯರಿಗೆ ಮೀಸಲಾತಿ ನೀಡಬೇಕು. ಅವರ ತಂದೆ ಅಥವಾ ಪತಿ ಮಾಡಿದ ಕಾರ್ಯಕ್ಕೆ ಅವರು ಏಕೆ ಹೆಸರುವಾಸಿಯಾಗಬೇಕು. ನಾವು ಅನ್ಯಾಯವನ್ನು ಅನುಭವಿಸಿದ್ದೇವೆ. ನಾನು ಈಗ ಮೌನವಾಗಿದ್ದರೆ, ನನ್ನ ಆತ್ಮಸಾಕ್ಷಿಗೆ ಉತ್ತರಿಸಲು ನನಗೆ ಸಾಧ್ಯವಾಗುವುದಿಲ್ಲ, ಎಂದು ಆಕೆ ಹೇಳಿದ್ದಾಳೆ.
ಇದನ್ನೂ ಓದಿ: ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳ ನಿವಾಸದ ಎಲ್ಲ ಸಿಬ್ಬಂದಿಗೆ ಕೊರೊನಾ ಪಾಸಿಟಿವ್!
ಅಪ್ರಾಪ್ತೆಯ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿ ಕುಲ್ದೀಪ್ ಸೆಂಗಾರ್ ಸದ್ಯ ತಿಹಾರ್ ಜೈಲಿನಲ್ಲಿದ್ದಾರೆ. ಜೀವಾವಧಿ ಶಿಕ್ಷೆ ಅನುಭವಿಸಿದ ಕುಲ್ದೀಪ್ ಸೆಂಗಾರ್ ಉತ್ತರಪ್ರದೇಶದ ವಿಧಾನಸಭೆಯ ಸದಸ್ಯರಾಗಿದ್ದರು. ಬಳಿಕ ಅವರನ್ನು ಕಳೆದ ವರ್ಷ ಫೆಬ್ರವರಿಯಲ್ಲಿ ವಿಧಾನಸಭೆಯಿಂದ ಅನರ್ಹಗೊಳಿಸಲಾಯಿತು.