ಧನ್ಬಾದ್(ಜಾರ್ಖಂಡ್): ಕಾರ್ಮಿಕನ ಪತ್ನಿ ಕೋಮಲ್ ಪಟೇಲ್ ಆತ್ಮಹತ್ಯೆಗೆ ಶರಣಾಗಿದ್ದು, ಅದಕ್ಕೂ ಮೊದಲು ವಿಡಿಯೋವೊಂದನ್ನ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾಳೆ.
ಜಿಲ್ಲೆಯ ಧನ್ಸಾರ್ ಪೊಲೀಸ್ ಠಾಣಾ ವ್ಯಾಪ್ತಿಯ ಮಹಾವೀರ್ ನಗರ ಭೂಡಾದಲ್ಲಿ ರೈಲ್ವೆ ಕೆಲಸಗಾರನಾಗಿದ್ದ ಅಲೋಕ್ ಕುಮಾರ್ ಪ್ರಸಾದ್ ಪತ್ನಿ 21 ವರ್ಷದ ಕೋಮಲ್ ಪಟೇಲ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇದಕ್ಕೂ ಮುನ್ನ ಮಹಿಳೆಯು ವಿಡಿಯೋ ತುಣುಕನ್ನು ಹರಿಬಿಟ್ಟಿದ್ದು, ಯಾವ ಕಾರಣಕ್ಕಾಗಿ ಈ ನಿರ್ಧಾರ ಕೈಗೊಳ್ಳುತ್ತಿದ್ದಾರೆ ಎಂಬುದನ್ನ ಬಹಿರಂಗಪಡಿಸಿದ್ದಾಳೆ.
ಕಳೆದ ಎರಡು ವರ್ಷಗಳ ಹಿಂದೆ ಅಲೋಕ್ ಕುಮಾರ್ನೊಂದಿಗೆ ಕೋಮಲ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಳು. ಇದಾದ ಬಳಿಕ ಗಂಡನ ಮನೆಯವರು ಮೇಲಿಂದ ಮೇಲೆ ವರದಕ್ಷಿಣೆ ಕಿರುಕುಳ ನೀಡಲು ಶುರು ಮಾಡಿದ್ದಾರೆ. ಹೀಗಾಗಿ ವಾಪಸ್ ತಂದೆ ಮನೆಗೆ ತೆರಳಿ ಅಲ್ಲೇ ಉಳಿದುಕೊಂಡಿದ್ದಳು. ಇದಾದ ಬಳಿಕ ತಂದೆ ಮಾತು ಕೇಳದೇ ಮತ್ತೊಮ್ಮೆ ಗಂಡನ ಮನೆಗೆ ತೆರಳಿದ್ದ ಆಕೆಯ ಮೇಲೆ ಗಂಡನ ಮನೆಯವರು ಅದೇ ರೀತಿ ಕಿರುಕುಳ ನೀಡಲು ಶುರು ಮಾಡಿದ್ದಾರೆ.
ಇದರಿಂದ ಮನನೊಂದ ಮಹಿಳೆ ಆತ್ಮಹತ್ಯೆಗೆ ಶರಣಾಗುವ ನಿರ್ಧಾರ ಕೈಗೊಂಡಿದ್ದಾಳೆ.
ವಿಡಿಯೋದಲ್ಲಿ ಹೇಳಿಕೊಂಡಿದ್ದೇನು?
'ಕ್ಷಮಿಸಿ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ನನ್ನ ಅತ್ತೆ ಮನೆಗೆ ಬಂದು ತಪ್ಪು ಮಾಡಿದೆ. ಕ್ಷಮಿಸಿ ತಂದೆ, ನಾನು ನಿಮ್ಮ ಮಾತು ಕೇಳಲಿಲ್ಲ. ನನ್ನ ಗಂಡ ಸುಧಾರಿಸಿದ್ದಾನೆಂದು ನಾನು ಭಾವಿಸಿದ್ದೆ. ಆದರೆ ನನ್ನೊಂದಿಗೆ ಜಗಳವಾಡ್ತಿದ್ದು, ವರದಕ್ಷಿಣೆಗೋಸ್ಕರ ಕಿರುಕುಳ ನೀಡುತ್ತಿದ್ದ. ಹೀಗಾಗಿ ಈ ನಿರ್ಧಾರ ಕೈಗೊಂಡಿದ್ದೇನೆ. ನಾನು ಸಾವನ್ನಪ್ಪಿದ ಬಳಿಕ ನನ್ನ ಮಗನನ್ನ ಚೆನ್ನಾಗಿ ನೋಡಿಕೊಳ್ಳಿ' ಎಂದಿದ್ದಾರೆ.
ಕೋಮಲ್ ಪತಿ ಅಲೋಕ್ ಕುಮಾರ್ ಪ್ರಸಾದ್, ಅತ್ತಿಗೆ, ಸಹೋದರಿ ಮತ್ತು ಸೋದರ ಮಾವ ವರದಕ್ಷಿಣೆಗಾಗಿ ಕಿರುಕುಳ ನೀಡಿದ್ದು, ಅವರು ನನ್ನ ಮಗಳನ್ನ ಕೊಲೆ ಮಾಡಿದ್ದಾರೆಂದು ತಂದೆ ಉಮೇಶ್ ಪ್ರಸಾದ್ ಆರೋಪಿಸಿದ್ದಾರೆ.