ಹೈದರಾಬಾದ್: ವಿಶ್ವದ ಅತ್ಯಂತ ಶಕ್ತಿಶಾಲಿ ನಾಯಕರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇಂದು 72ನೇ ಹುಟ್ಟುಹಬ್ಬದ ಸಂಭ್ರಮ. ಅವರ ಜೀವನದಲ್ಲಿ ತಾಯಿ ಹೀರಾಬೆನ್ ಮಹತ್ವದ ಮಾತ್ರ ನಿರ್ವಹಿಸಿದ್ದು, ಇಂದಿಗೂ ಅತ್ಯಂತ ಸರಳ ಜೀವನ ನಡೆಸುವ ಮೂಲಕ ಅನೇಕರಿಗೆ ಮಾದರಿಯಾಗಿದ್ದಾರೆ. ಗುಜರಾತಿನ ವಡ್‌ನಗರದ ಬಡ ಕುಟುಂಬದಲ್ಲಿ ಜನಿಸಿದ ನರೇಂದ್ರ ಮೋದಿ ದೇಶದ ಉನ್ನತ ಸ್ಥಾನವೇರುವ ಮುನ್ನ ಅನೇಕ ನೋವು, ಸಮಸ್ಯೆ ಎದುರಿಸಿದ್ದಾರೆ. ಇಂದು ವಿಶ್ವ ನಾಯಕರಾಗಿ ಗುರುತಿಸಿಕೊಳ್ಳುವಲ್ಲಿ ಅವರ ತಾಯಿ ಮಹತ್ವದ ಪಾತ್ರ ನಿರ್ವಹಿಸಿದ್ದಾರೆ.
100 ವರ್ಷ ಆದ್ರೂ ಸಹ ಗುಜರಾತ್ನ ಗಾಂಧಿನಗರದಲ್ಲಿರುವ ಪುತ್ರ ಪಂಕಜ್ ಮೋದಿ ನಿವಾಸದಲ್ಲಿ ಜೀವನ ಸಾಗಿಸುತ್ತಿರುವ ಅವರು, ಪ್ರಧಾನಿ ನರೇಂದ್ರ ಮೋದಿ ಅವರ ಜೀವನದಲ್ಲಿ ಯಾವ ರೀತಿಯಾಗಿ ಹೀರೋ ಆಗಿದ್ದರು ಎಂಬುದರ ಮಾಹಿತಿ ಇಲ್ಲಿದೆ.
ನಮೋ ಕುಟುಂಬ: ಹೀರಾಬೆನ್ ಅವರಿಗೆ ಐವರು ಪುತ್ರರು ಹಾಗೂ ಓರ್ವ ಪುತ್ರಿ. ಹಿರಿಯ ಪುತ್ರ ಸೋಭಾಯ್ ಮೋದಿ ಗುಜರಾತ್ ಆರೋಗ್ಯ ಇಲಾಖೆಯ ನಿವೃತ್ತ ಅಧಿಕಾರಿ. ಎರಡನೇ ಮಗ ಅಮೃತಭಾಯ್ ಲೇಥ್ ಮಷಿನ್ ಆಪರೇಟರ್. ಪ್ರಹ್ಲಾದ್ ಭಾಯ್ ಧಾನ್ಯಗಳ ಅಂಗಡಿ ವ್ಯಾಪಾರಿ. ನರೇಂದ್ರ ದಾಮೋದರ ದಾಸ್ ಮೋದಿ ದೇಶದ ಪ್ರಧಾನಿಯಾಗಿ ಸೇವೆ. ಉಳಿದಂತೆ ಪಂಕಜ್ ಮೋದಿ ಗುಜರಾತ್ನಲ್ಲಿ ಸರ್ಕಾರಿ ಕೆಲಸ ಮಾಡ್ತಿದ್ದು, ವಾಸಂತಿ ಬೆಹನ್ ಎಂಬ ಮಗಳಿದ್ದಾರೆ. ಇವರದು ಮಧ್ಯಮ ವರ್ಗದ ಸರಳ ಜೀವನ ನಡೆಸುವ ಕುಟುಂಬ.
13ನೇ ವಯಸ್ಸಿನಲ್ಲೇ ಮೋದಿ ಮದುವೆ: ಮೋದಿ ಅವರಿಗೆ 13 ವರ್ಷವಾಗಿದ್ದ ಸಂದರ್ಭದಲ್ಲೇ ಪೋಷಕರು ಬಲವಂತವಾಗಿ ಜಶೋದಾಬೆನ್ ಎಂಬುವರ ಜೊತೆ ವಿವಾಹ ನಿಶ್ಚಯ ಮಾಡಿದರು. ಮುಂದೆ 5 ವರ್ಷ ಕಳೆದ ಮೇಲೆ ಅಂದರೆ 1968ರಲ್ಲಿ ಜಶೋದಾಬೆನ್ ಅವರನ್ನು ಮೋದಿ ಮನೆಗೆ ಕಳುಹಿಸಿಕೊಡಲಾಯಿತು. ಆದರೆ, ವಿವಾಹಕ್ಕೆ ಮನಸ್ಸು ಹೊಂದಿರದ ಮೋದಿ, ಕೆಲ ದಿನಗಳಷ್ಟೇ ಪತ್ನಿಯ ಜೊತೆ ಕಾಲ ಕಳೆದು ಬಳಿಕ ಅಹಮದಾಬಾದ್‌ನಲ್ಲಿರುವ ಮಾವನ ಕ್ಯಾಂಟೀನ್ ಸೇರಿಕೊಳ್ಳಲು ತೆರಳಿದರು. ಮುಂದೆ ಜಶೋದಾಬೆನ್ ತಮ್ಮ ಶಿಕ್ಷಣವನ್ನು ಪೂರ್ಣಗೊಳಿಸಿ ಶಿಕ್ಷಕಿಯಾಗಿ ವೃತ್ತಿ ಜೀವನ ಆರಂಭಿಸಿ, ಸದ್ಯ ನಿವೃತ್ತಿ ಪಡೆದಿದ್ದಾರೆ.
ಬಾಲ್ಯದಲ್ಲೇ ಚಹಾ ಮಾರಿ ಜೀವನ: ಮೋದಿಯವರ ತಂದೆ ವಡ್‌ನಗರದ ರೈಲ್ವೆ ನಿಲ್ದಾಣದಲ್ಲಿ ಚಿಕ್ಕದೊಂದು ಟೀ ಸ್ಟಾಲ್ ಇಟ್ಟುಕೊಂಡಿದ್ದರು. ಅದರ ಆದಾಯ ಅಷ್ಟಕ್ಕಷ್ಟೇ. ಇಂಥ ಸ್ಥಿತಿಯಲ್ಲೇ ಪುಟ್ಟಮನೆಯಲ್ಲಿ ಪೋಷಕರು, ಸೋದರರ ಜೊತೆ ಮೋದಿ ವಾಸ್ತವ್ಯ. ಮೈತುಂಬಾ ಬಡತನವಿದ್ದ ಕಾರಣ ಶ್ರಮ ಎಂಬುದು ಮೋದಿಗೆ ಬಾಲ್ಯದಲ್ಲೇ ಮೈಗೂಡಿತ್ತು. ತಾಯಿಗೆ ಮನೆ ಕೆಲಸದಲ್ಲಿ ನೆರವಾಗುತ್ತಿದ್ದರು. ರೈಲ್ವೆ ನಿಲ್ದಾಣಕ್ಕೆ ತೆರಳಿ ತಂದೆಗೆ ಚಹಾ ಅಂಗಡಿ ನಿರ್ವಹಣೆಯಲ್ಲೂ ಕೈಜೋಡಿಸುತ್ತಿದ್ದರು. ಮುಂದೆ ತಂದೆಗೆ ಈ ಕೆಲಸ ನಿರ್ವಹಿಸುವುದು ಸಾಧ್ಯವಾಗದೆ ಹೋದಾಗ ಸೋದರನ ಜೊತೆಗೂಡಿ ತಾವೇ ಚಹಾ ಅಂಗಡಿ ತೆರೆದು, ಕುಟುಂಬಕ್ಕೆ ನೆರವಾಗುವ ಯತ್ನ ಮಾಡಿದರು. ಇನ್ನು, ಮೋದಿ ಚಿಕ್ಕ ವಯಸ್ಸಿನಲ್ಲಿದ್ದಾಗಲೇ ಅವರ ತಂದೆ ಕ್ಯಾನ್ಸರ್ನಿಂದ ನಿಧನರಾಗುತ್ತಾರೆ. ಹೀಗಾಗಿ, ಚಹಾ ಅಂಗಡಿ ಜವಾಬ್ದಾರಿಯನ್ನು ನರೇಂದ್ರ ಮೋದಿ ವಹಿಸಿಕೊಳ್ಳುತ್ತಾರೆ.
18ನೇ ವಯಸ್ಸಿನಲ್ಲಿ ಸಂಸಾರ ಆರಂಭಿಸಿದ ನಮೋ ಕೆಲ ದಿನಗಳಲ್ಲೇ ಹಿಮಾಲಯಕ್ಕೆ ತೆರಳುತ್ತಾರೆ. ಈ ವೇಳೆ ಸಂಘ ಪರಿವಾರದ ಭಾಗವಾಗುತ್ತಾರೆ. ಇದಾದ ಬಳಿಕ ಕ್ರಮೇಣವಾಗಿ ರಾಜಕೀಯಕ್ಕೆ ಬಂದ ಅವರು, 2001ರಲ್ಲಿ ಗುಜರಾತ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡುತ್ತಾರೆ.
ಲಂಚ ಪಡೆಯದಂತೆ ತಾಯಿ ಕಿವಿಮಾತು: 2001ರಲ್ಲಿ ಮೊದಲ ಸಲ ಗುಜರಾತ್ ಸಿಎಂ ಆಗಿ ಪ್ರಮಾಣವಚನ ಸ್ವೀಕಾರ ಮಾಡುವ ನರೇಂದ್ರ ಮೋದಿ ತಾಯಿಯ ಆಶೀರ್ವಾದ ಪಡೆದುಕೊಳ್ಳಲು ತೆರಳುತ್ತಾರೆ. ಈ ವೇಳೆ ಯಾವುದೇ ಕಾರಣಕ್ಕೂ ಲಂಚ ಪಡೆದುಕೊಳ್ಳಬೇಡ ಎಂದು ತಾಯಿ ಕಿವಿಮಾತು ಹೇಳುತ್ತಾರೆ. ಇದಾದ ಬಳಿಕ ಮೋದಿ ಸತತ 4 ಸಲ ಗುಜರಾತ್ ಸಿಎಂ ಆಗಿ ಆಯ್ಕೆಯಾಗ್ತಾರೆ.
2014ರಲ್ಲಿ ಲೋಕಸಭೆ ಚುನಾವಣೆಯಲ್ಲಿ ಭರ್ಜರಿ ಜಯಭೇರಿ ಬಾರಿಸಿದ ಮೋದಿ ನೇತೃತ್ವದ ಬಿಜೆಪಿ ಕೇಂದ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯುತ್ತದೆ. ಈ ವೇಳೆ ತಾಯಿ ಹೀರಾಬೆನ್ ಆಶೀರ್ವಾದವನ್ನು ಸಹ ನಮೋ ಪಡೆದುಕೊಂಡಿದ್ದರು. ಈ ವೇಳೆ ತಮ್ಮ ಜೀವನದಲ್ಲಿ ತಾಯಿಯ ಪಾತ್ರ ಬಹಳ ಮಹತ್ವದ್ದಾಗಿದೆ. ನನ್ನ ಜೀವನಕ್ಕೆ ಅವರು ಆಧಾರ ಎಂದು ನಮೋ ಹೇಳಿದ್ದರು.
ತಾಯಿ ನೆನೆದು ಕಣ್ಣೀರು ಹಾಕಿದ್ದ ನಮೋ: 2015ರಲ್ಲಿ ನರೇಂದ್ರ ಮೋದಿ ಅವರು ಅಮೆರಿಕಕ್ಕೆ ತೆರಳಿದ್ದ ವೇಳೆ ಫೇಸ್ಬುಕ್ ಸಿಇಒ ಮಾರ್ಕ್ ಜುಕರ್ಬರ್ಗ್ ಜೊತೆ ಸಂವಾದ ನಡೆಸಿದ್ದರು. ಈ ವೇಳೆ ನಮ್ಮ ತಾಯಿ ಮನೆಯ ಎಲ್ಲ ಕೆಲಸ ಖುದ್ದಾಗಿ ಮಾಡ್ತಾರೆ. ಆಕೆ ವಿದ್ಯಾವಂತಳಲ್ಲ, ಆದ್ರೂ ಟಿವಿಯಲ್ಲಿ ಬರುವ ರಾಷ್ಟ್ರೀಯ, ಪ್ರಪಂಚದ ಸುದ್ದಿ ನೋಡುತ್ತಾರೆ. ನಾನು ಚಿಕ್ಕವನಾಗಿದ್ದ ಸಂದರ್ಭದಲ್ಲಿ ಮನೆಕೆಲಸ ಮಾಡಲು ನೆರೆ ಮನೆಗಳಿಗೆ ತೆರಳುತ್ತಿದ್ದರು ಎಂದು ತಿಳಿಸಿದ್ದರು. ಈ ವೇಳೆ ತಮ್ಮ ತಾಯಿಯನ್ನು ನೆನೆದು ಕಣ್ಣೀರು ಹಾಕಿರುವ ಘಟನೆ ಸಹ ನಡೆದಿತ್ತು.
ಇನ್ನು, 2016ರಲ್ಲಿ ದೆಹಲಿಗೆ ಆಗಮಿಸಿದ್ದ ಹೀರಾಬೆನ್ ಅವರಿಗೆ ಪ್ರಧಾನಿ ಮೋದಿ ತಮ್ಮ ಕಚೇರಿ ತೋರಿಸಿದ್ದರು. ಈ ವೇಳೆ ವ್ಹೀಲ್ಚೇರ್ ಮೇಲೆ ಅವರು ಕುಳಿತುಕೊಂಡಿದ್ದ ಕೆಲ ಚಿತ್ರಗಳನ್ನು ಟ್ವೀಟ್ ಮಾಡಿಕೊಂಡಿದ್ದರು. 2017ರಲ್ಲಿ ನೋಟು ಅಮಾನ್ಯೀಕರಣ ಮಾಡಿದ್ದ ಸಂದರ್ಭದಲ್ಲಿ ಹೀರಾಬೆನ್ ಖುದ್ದಾಗಿ ಬ್ಯಾಂಕ್ಗೆ ಹೋಗಿ ನೋಟು ಬದಲಾವಣೆ ಮಾಡಿ, ನಮೋ ನಿರ್ಧಾರಕ್ಕೆ ಬೆಂಬಲ ವ್ಯಕ್ತಪಡಿಸಿದ್ದರು.
2019ರ ಲೋಕಸಭೆ ಚುನಾವಣೆ ನಂತರ ಸಹ ನಮೋ ತಾಯಿಯ ಆಶೀರ್ವಾದ ಪಡೆದುಕೊಂಡಿದ್ದರು. ಕಳೆದ ಕೆಲ ತಿಂಗಳ ಹಿಂದೆ 100ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದ ತಾಯಿ ಹೀರಾಬೆನ್ ಅವರ ಆಶೀರ್ವಾದ ಪಡೆದುಕೊಂಡಿದ್ದ ನಮೋ ಕೆಲ ಹೊತ್ತು ಅವರೊಂದಿಗೆ ಸಮಯ ಕಳೆದಿದ್ದರು.