ಲಕ್ನೋ(ಉತ್ತರ ಪ್ರದೇಶ): ಯುಎಪಿಎ ಸೇರಿದಂತೆ ಇತರೆ ಕಾಯ್ದೆಗಳ ಅಡಿ ಬಂಧನಕ್ಕೆ ಒಳಗಾಗಿದ್ದ ಕೇರಳ ಪತ್ರಕರ್ತ ಸಿದ್ಧಿಕಿ ಕಪ್ಪನ್ ಅವರು ಇಂದು ಲಕ್ನೋ ಜೈಲಿನಿಂದ ಬಿಡುಗಡೆಗೊಂಡಿದ್ದಾರೆ. ಕಳೆದ ಎರಡು ವರ್ಷಗಳಿಂದ ಬಂಧನದಲ್ಲಿದ್ದ ಅವರಿಗೆ ಜಾಮೀನು ಸಿಕ್ಕರೂ ಬಿಡುಗಡೆಗೊಂಡಿರಲಿಲ್ಲ. ಉತ್ತರ ಪ್ರದೇಶದ ಹತ್ರಾಸ್ನಲ್ಲಿ ನಡೆದಿದ್ದ ದಲಿತ ಮಹಿಳೆ ಅತ್ಯಾಚಾರ ಮತ್ತು ಸಾವಿನ ಪ್ರಕರಣ ಸಂಬಂಧ ವರದಿ ಮಾಡಲು ಸಿದ್ದಿಕಿ ಅವರು ಉತ್ತರ ಪ್ರದೇಶಕ್ಕೆ ತೆರಳಿದ್ದರು. ಈ ವೇಳೆ ಮಥುರಾದಲ್ಲಿ ಸಿದ್ದಿಕಿ ಮತ್ತು ಮೂವರು ಸದ್ಯ ನಿಷೇಧಕ್ಕೆ ಒಳಗಾಗಿರುವ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದೊಂದಿಗೆ ಸಂಬಂಧ ಹೊಂದಿದ್ದು, ಕೋಮು ವೈಷಮ್ಯ ಹರಡುವ ಉದ್ದೇಶದಿಂದ ಹತ್ರಾಸ್ ಕಡೆ ಪ್ರಯಾಣ ಬೆಳೆಸಿದ್ದಾರೆ ಎಂಬ ಆರೋಪದ ಮೇಲೆ ಅವರನ್ನು ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದರು.
ಬಂಧನದ ಬಳಿಕ ಜಾಮೀನು ಅರ್ಜಿಗೆ ಸಿದ್ದಿಕಿ ಅರ್ಜಿ ಸಲ್ಲಿಸಿದ್ದರು. ಆದರೆ, ಅಲಹಬಾದ್ ನ್ಯಾಯಾಲಯದ ಲಕ್ನೋ ಪೀಠ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು. ಸಿದ್ದಿಕಿ ಸೇರಿದಂತೆ ನಾಲ್ವರು ಆರೋಪಿಗಳು ಹತ್ರಾಸ್ನಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರಲು ಯತ್ನಿಸುತ್ತಿದ್ದಾರೆ ಎಂದು ಈ ಹಿಂದೆ ಆರೋಪಿಸಿತ್ತು. ಜೈಲಿನಿಂದ ಬಿಡುಗಡೆಗೊಂಡ ಬಳಿಕ ಮಾತನಾಡಿರುವ ಸಿದ್ಧಿಕಿ, ನಾನು ಹತ್ರಾಸ್ ಪ್ರಕರಣದ ವರದಿಗೆ ತೆರಳಿದ್ದೆ. ವರದಿ ಮಾಡುವುದು ಅಪರಾಧವಾಗಿದೆ. 28 ತಿಂಗಳ ಕಾಲ ಕಳೆದರೂ ನನಗೆ ನ್ಯಾಯ ಸಿಗಲಿಲ್ಲ. ಆದರೆ 28ತಿಂಗಳ ಹೋರಾಟದಿಂದ ನಾನು ಕಡೆಗೂ ಹೊರಗೆ ಬಂದಿದ್ದೇನೆ. ಖುಷಿಯಾಗಿದ್ದೇನೆ ಎಂದು ತಿಳಿಸಿದ್ದಾರೆ ಎಂದು ಸಿದ್ಧಿಕಿ ತಿಳಿಸಿದರು.
ಕಳೆದ ಸೆಪ್ಟೆಂಬರ್ನಲ್ಲಿ ಈ ಪ್ರಕರಣ ಸಂಬಂಧ ಸುಪ್ರೀಂಕೋರ್ಟ್ ಜಾಮೀನು ನೀಡಿತ್ತು. ಆದರೆ, ಜಾರಿ ನಿರ್ದೇಶನಾಲಯದ ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ ಅವರಿಗೂ ಜೈಲು ಶಿಕ್ಷೆ ಮುಂದುವರೆದಿತ್ತು. ಪ್ರಾರಂಭದಲ್ಲಿ ಸಿದ್ದಿಕಿ ಅವರ ವಿರುದ್ಧ ದೇಶದ್ರೋಹ ಮತ್ತು ಯುಎಪಿಎ ಪ್ರಕರಣದಲ್ಲಿ ಬಂಧಿಸಲಾಗಿತ್ತು. ಬಳಿಕ ಫೆಬ್ರವರಿ 2022ರಲ್ಲಿ ಜಾರಿ ನಿರ್ದೇಶನಾಲಯ ಸಿದ್ದಿಕಿ ಪಿಎಫ್ಐ ನಿಂದ ಅಕ್ರಮವಾಗಿ ಹಣ ಪಡೆದಿದ್ದರೆ ಎಂದು ಆರೋಪಿಸಿ ಈತನ ವಿರುದ್ಧ ಪ್ರಕರಣ ದಾಖಲಿಸಿದ್ದರು.
ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಡಿಸೆಂಬರ್ 23ರಲ್ಲಿ ಅಲಹಾಬಾದ್ ಹೈಕೋರ್ಟ್ ಜಾಮೀನು ನೀಡಿತು. ಈ ಜಾಮೀನು ಸಂಬಂಧ ಅಗತ್ಯ ದಾಖಲೆಗಳನ್ನು ಬುಧವಾರ ನ್ಯಾಯಾಲಯದ ಮುಂದೆ ನೀಡಲಾಗಿದ್ದು, ಸಿದ್ದಿಕಿ ಇಂದು ಬಿಡುಗಡೆಗೊಂಡಿದ್ದಾರೆ.
ಹೋರಾಟ ಮುಂದುವರಿಕೆ: ಜಾಮೀನು ಸಿಕ್ಕರೂ ಬಿಡುಗಡೆ ವಿಳಂಬವಾದ ಕುರಿತು ಮಾತನಾಡಿರುವ ಸಿದ್ದಿಕಿ, ದಾಖಲೆಗಳ ಪರಿಶೀಲನೆ ಯಾಕೆ ತಡವಾಯಿತು ಎಂದು ತಿಳಿದಿಲ್ಲ. ಯಾರು ನನ್ನನ್ನು ಕಂಬಿ ಹಿಂದೆ ನೋಡಬೇಕು ಎಂದು ಬಯಸಿದ್ದರು ಎಂಬುದು ನನಗೆ ತಿಳಿದಿಲ್ಲ ಎಂದಿದ್ದಾರೆ. ಇದೇ ವೇಳೆ ತಮ್ಮ ಮುಂದಿನ ನಡೆ ಕುರಿತು ಪ್ರತಿಕ್ರಿಯಿಸಿದ ಅವರು, ತಮ್ಮ ಹೋರಾಟ ಮುಂದುವರೆಸುವುದಾಗಿ ತಿಳಿಸಿದ್ದಾರೆ.
ಎರಡು ವರ್ಷಗಳ ಬಳಿಕ ಬಿಡುಗಡೆಗೊಂಡ ಸಿದ್ದಿಕಿ ಅವರನ್ನು ಅವರ ಹೆಂಡತಿ ಮತ್ತು ಕುಟುಂಬ ಸದಸ್ಯರು ಕಣ್ಣೀರಿನ ಜೊತೆ ಬಿಸಿ ಅಪ್ಪುಗೆ ಮೂಲಕ ಸ್ವಾಗತಿಸಿದರು.
ಇದನ್ನೂ ಓದಿ: ಭಾರತದ ಸುಗಂಧದ್ರವ್ಯ, ಕೃತಕ ಚರ್ಮದ ಉತ್ಪನ್ನ ಮೆಚ್ಚಿದ ಇಂಗ್ಲೆಂಡ್ ರಾಜಕುಮಾರ