ತಿರುವನಂತಪುರಂ (ಕೇರಳ): ಹಿಜಾಬ್ ವಿವಾದ ಕರ್ನಾಟಕದಲ್ಲಿ ಭಾರಿ ಸದ್ದು ಮಾಡಿತ್ತು. ಇದು ದೇಶವಲ್ಲದೇ, ವಿದೇಶದಲ್ಲೂ ಸುದ್ದಿಯಾಗಿತ್ತು. ಸದ್ಯ ಪ್ರಕರಣ ಸುಪ್ರೀಂ ಕೋರ್ಟ್ನಲ್ಲಿದೆ. ಈ ಮಧ್ಯೆ ಕೇರಳದ 7 ಮುಸ್ಲಿಂ ವಿದ್ಯಾರ್ಥಿನಿಯರು 'ಆಪರೇಷನ್ ಥಿಯೇಟರ್'ನಲ್ಲೂ ಹಿಜಾಬ್ ಧರಿಸಲು ಅವಕಾಶ ನೀಡಬೇಕು ಎಂದು ಕೋರಿ ವೈದ್ಯಕೀಯ ಕಾಲೇಜಿಗೆ ಪತ್ರ ಬರೆದಿದ್ದಾರೆ. ಈ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದು ಕಾಲೇಜು ತಿಳಿಸಿದೆ.
ಇಸ್ಲಾಂ ನಂಬಿಕೆಗಳ ಪ್ರಕಾರ, ಮಹಿಳೆಯರು ಕೂದಲು ಮುಚ್ಚಿಕೊಳ್ಳುವ ಮತ್ತು ಕೈ ಕಾಣದಂತೆ ವಸ್ತ್ರ ಧರಿಸುವುದು ಕಡ್ಡಾಯವಾಗಿದೆ. ಇದು ಆಪರೇಷನ್ ಥಿಯೇಟರ್ನಲ್ಲಿ ಸಾಧ್ಯವಿಲ್ಲ. ಹೀಗಾಗಿ ಅಲ್ಲಿಯೂ ಸಹಿತ ಹಿಜಾಬ್ ಧರಿಸಲು ಅವಕಾಶ ಮಾಡಿಕೊಡಬೇಕು ಎಂದು ಕೋರಿ ತಿರುವನಂತಪುರಂ ವೈದ್ಯಕೀಯ ಕಾಲೇಜಿನ ವಿವಿಧ ಬ್ಯಾಚಿನ 7 ವಿದ್ಯಾರ್ಥಿನಿಯರು ಪ್ರಾಂಶುಪಾಲರಿಗೆ ಪತ್ರ ಬರೆದಿದ್ದಾರೆ. ಕೂದಲು ಕಾಣದಂತೆ ತಡೆಯಲು ಆಪರೇಷನ್ ಥಿಯೇಟರ್ ಒಳಗೆ ಲಾಂಗ್ ಸ್ಲೀವ್ ಸ್ಕ್ರಬ್ ಜಾಕೆಟ್ ಮತ್ತು ಸರ್ಜಿಕಲ್ ಹುಡ್‌ಗಳನ್ನು ಧರಿಸಲು ಅನುಮತಿ ನೀಡಬೇಕು ಎಂದು ಉಲ್ಲೇಖಿಸಿ, ವಿದ್ಯಾರ್ಥಿನಿಯರು ಜೂನ್ 26 ರಂದು ಪತ್ರ ಬರೆದಿದ್ದಾರೆ.
ಪರಿಶೀಲನೆಗೆ ತಂಡ ರಚನೆ: ಈ ಕುರಿತಂತೆ ಚರ್ಚಿಸಲು ಶಸ್ತ್ರಚಿಕಿತ್ಸಕರ ಸಮಿತಿ ಮತ್ತು ಸೋಂಕು ನಿಯಂತ್ರಣ ತಂಡವನ್ನು ರಚಿಸುವುದಾಗಿ ಕಾಲೇಜು ತಿಳಿಸಿದೆ.ಆಪರೇಷನ್ ಥಿಯೇಟರ್ನಲ್ಲಿ ಲಾಂಗ್ ಸ್ಲೀವ್ ಸ್ಕ್ರಬ್ ಜಾಕೆಟ್ ಮತ್ತು ಸರ್ಜಿಕಲ್ ಹುಡ್‌ಗಳ ಧಾರಣೆಗೆ ಅವಕಾಶ ಮತ್ತು ಸಾಧ್ಯತೆಯ ಬಗ್ಗೆ ತಂಡ ನಿರ್ಧರಿಸಲಿದೆ ಎಂದು ಕಾಲೇಜಿನ ಪ್ರಾಂಶುಪಾಲರು ತಿಳಿಸಿದ್ದಾರೆ.
ವೈದ್ಯರು ಮತ್ತು ರೋಗಿಗೆ ಯಾವ ತೆರನಾದ ಸೋಂಕು ಬಾಧಿತವಾಗದಿರಲಿ ಎಂದು ಶಸ್ತ್ರಚಿಕಿತ್ಸಕ ವಿಭಾಗಕ್ಕೆ ತೆರಳಿದಾಗ ಪ್ರತಿ ಬಾರಿ ಕೈಗಳನ್ನು ಮೊಣಕೈಯವರೆಗೆ ತೊಳೆದು ಮತ್ತು ಕ್ರಿಮಿನಾಶಕವನ್ನು ಸಿಂಪಡಣೆ ಮಾಡಿಕೊಳ್ಳಬೇಕು. ಇದರ ಬರಲು ಪೂರ್ಣ ತೋಳಿನ ಬಟ್ಟೆಯನ್ನು ಅನುಮತಿಸಲಾಗುವುದಿಲ್ಲ ಎಂದು ವಿದ್ಯಾರ್ಥಿನಿಯರಿಗೆ ತಿಳಿ ಹೇಳಲಾಗಿದೆ ಎಂದರು.
ಆಪರೇಷನ್ ಥಿಯೇಟರ್ ಯಾವಾಗಳು ಶುಚಿಯಾಗಿರಬೇಕು. ಹೀಗಾಗಿ ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಯಾವಾಗಲೂ ಮೊಣಕೈವರೆಗೆ ತೊಳೆಯುತ್ತಲೇ ಇರಬೇಕು. ಅದಕ್ಕಾಗಿಯೇ ಆಫ್ ಸ್ಲೀವ್ ಬಟ್ಟೆಗಳನ್ನು ಧರಿಸಲಾಗುತ್ತದೆ. ಇದು ವಿಶ್ವಾದ್ಯಂತ ಅಂಗೀಕರಿಸಿದ ಮಾನದಂಡವಾಗಿದೆ. ರೋಗಿಗೆ ಇತರ ಸೋಂಕನ್ನ ತಪ್ಪಿಸಲು ಬಳಸುವ ವಿಧಾನವಾಗಿದೆ. ವಿದ್ಯಾರ್ಥಿನಿಯರು ಈಗ ಅಲ್ಲಿಯೂ ಹಿಜಾಬ್ ಮತ್ತು ಕೈಗಳು ಕಾಣದಂತೆ ಲಾಂಗ್ ಸ್ಲೀವ್ ಸ್ಕ್ರಬ್ ಜಾಕೆಟ್ ಮತ್ತು ಸರ್ಜಿಕಲ್ ಹುಡ್‌ಗಳನ್ನು ಧರಿಸಲು ಅನುಮತಿ ಕೋರಿದ್ದಾರೆ. ಈ ಬಗ್ಗೆ ಸೋಂಕು ನಿಯಂತ್ರಣ ತಂಡದೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು. ಇನ್ನು 10 ದಿನಗಳೊಳಗೆ ಪತ್ರಕ್ಕೆ ಪ್ರತಿಕ್ರಿಯೆ ನೀಡುವುದಾಗಿ ಪ್ರಾಂಶುಪಾಲರು ತಿಳಿಸಿದ್ದಾರೆ.
ಕರ್ನಾಟಕದಲ್ಲಿ ಹಿಜಾಬ್ ವಿವಾದವೇನು?: ರಾಜ್ಯದಲ್ಲಿ ಹಿಜಾಬ್ ಭಾರಿ ವಿವಾದ ಸೃಷ್ಟಿಸಿತ್ತು. ಸರ್ಕಾರಿ ಶಾಲೆಗಳಲ್ಲಿ ಯಾವುದೇ ಧರ್ಮ ಸೂಚಕ ವಸ್ತ್ರಗಳನ್ನು ಧರಿಸಿ ಬರುವಂತಿಲ್ಲ ಎಂದು ಸರ್ಕಾರ ಆದೇಶಿಸಿತ್ತು. ಇದರ ವಿರುದ್ಧ ಮುಸ್ಲಿಂ ವಿದ್ಯಾರ್ಥಿನಿಯರು ಹೋರಾಟ ನಡೆಸಿದ್ದರು. ಬಳಿಕ ಹೈಕೋರ್ಟ್ ಈ ಬಗ್ಗೆ ಮಹತ್ವದ ತೀರ್ಪು ನೀಡಿ, ಶಾಲಾ ಕಾಲೇಜುಗಳಲ್ಲಿ ಆಯಾ ಮಂಡಳಿಯ ಸಮವಸ್ತ್ರ ಧರಿಸಬೇಕು ಎಂದು ಹೇಳಿತ್ತು. ಇದನ್ನು ಕೆಲ ಮುಸ್ಲಿಮರು ಸುಪ್ರೀಂಕೋರ್ಟ್ನಲ್ಲಿ ಸವಾಲು ಮಾಡಿದ್ದಾರೆ.
ಇದನ್ನೂ ಓದಿ: Uniform Civil Code: ಏಕರೂಪ ನಾಗರಿಕ ಸಂಹಿತೆ ಬಗ್ಗೆ ಪ್ರಧಾನಿ ಮೋದಿ ಮಾತು; ತಡರಾತ್ರಿ ಸಭೆ ನಡೆಸಿದ ಮುಸ್ಲಿಂ ಕಾನೂನು ಮಂಡಳಿ