ಕೊಚ್ಚಿ (ಕೇರಳ): ಕೇರಳದ ಕೊಚ್ಚಿ ಜಿಲ್ಲೆಯ ಕಲಮಸ್ಸೆರಿಯಲ್ಲಿ ಇಂದು ಬೆಳಗ್ಗೆ ಕ್ರಿಶ್ಚಿಯನ್ ಧಾರ್ಮಿಕ ಸಭೆಯಲ್ಲಿ ನಡೆದ ಸರಣಿ ಸ್ಫೋಟಗಳ ಹೊಣೆ ಹೊತ್ತು ವ್ಯಕ್ತಿಯೊಬ್ಬ ಪೊಲೀಸರಿಗೆ ಶರಣಾಗಿದ್ದಾನೆ. ತನ್ನನ್ನು ಡೊಮಿನಿಕ್ ಮಾರ್ಟಿನ್ ಎಂದು ಹೇಳಿಕೊಂಡಿರುವ ಈ ವ್ಯಕ್ತಿ ತ್ರಿಶೂರ್ ಜಿಲ್ಲೆಯ ಪೊಲೀಸರ ಮುಂದೆ ಹಾಜರಾಗಿದ್ದಾನೆ.
ಪ್ರಾರ್ಥನಾ ಸಭೆಯಲ್ಲಿ ನಡೆದ ಸರಣಿ ಸ್ಫೋಟಗಳಲ್ಲಿ ಓರ್ವ ಮಹಿಳೆ ಮೃತಪಟ್ಟಿದ್ದಾರೆ. ಅಲ್ಲದೇ, 45 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದು, ಸಾಕಷ್ಟು ಆತಂಕಕ್ಕೆ ಕಾರಣವಾಗಿದೆ. ಇದರ ಬೆನ್ನಲ್ಲೇ, ಡೊಮಿನಿಕ್ ಮಾರ್ಟಿನ್ ಸ್ಫೋಟಗಳ ಹೊಣೆ ಹೊತ್ತಿದ್ದಾನೆ. ತಾನು Jehovah's Witnesses ಪಂಗಡದ ಸದಸ್ಯ ಎಂದೂ ಹೇಳಿಕೊಂಡಿರುವ ಈತ, ಪೊಲೀಸರಿಗೆ ಶರಣಾಗುವ ಮೊದಲು ಫೇಸ್‌ಬುಕ್‌ನಲ್ಲಿ ವಿಡಿಯೋವೊಂದನ್ನೂ ಈ ಪೋಸ್ಟ್ ಮಾಡಿದ್ದಾನೆ. Jehovah's Witnesses ಗುಂಪು ಅಮೆರಿಕದಲ್ಲಿ 19ನೇ ಶತಮಾನದಲ್ಲಿ ಹುಟ್ಟಿಕೊಂಡಿತ್ತು.
ಮಲಯಾಳಂ ಮತ್ತು ಹಿಂದಿ ಭಾಷೆಯಲ್ಲಿರುವ ಈ ವಿಡಿಯೋ ಸಂದೇಶದಲ್ಲಿ ತನ್ನ ನಡೆಯನ್ನು ಸಮರ್ಥಿಸಿಕೊಂಡಿದ್ದಾನೆ. Jehovah's Witnesses ಪಂಗಡದವರನ್ನು "ಮಕ್ಕಳಲ್ಲಿ ದ್ವೇಷವನ್ನು ಹರಡುವ ದ್ರೋಹಿಗಳು. ಎಲ್ಲಾ ಮಾನವರಿಗೆ ಆಪತ್ತನ್ನು ಬಯಸುತ್ತಾರೆ'' ಎಂದು ಆರೋಪಿಸಿರುವ ಈತ, ''ನಾನು 16 ವರ್ಷಗಳ ಕಾಲ ಭಕ್ತರೊಂದಿಗೆ ಇದ್ದೆ. ತಮ್ಮನ್ನು ತಾವು ಸರಿಪಡಿಸಿಕೊಳ್ಳುವಂತೆ ಒತ್ತಾಯಿಸಿದ್ದೆ. ಆದರೆ ಅವರು ನಿರಾಕರಿಸಿದರು. ಯೆಹೋವ ಪ್ರಜಾಪ್ರಭುತ್ವ ಮತ್ತು ಪ್ರಜಾಸತ್ತಾತ್ಮಕ ವ್ಯವಸ್ಥೆಗಳಿಗೆ ವಿರುದ್ಧವಾಗಿವಾಗಿದೆ'' ಎಂದು ಹೇಳಿದ್ದಾನೆ.
ತ್ರಿಶೂರ್ ಜಿಲ್ಲೆಯ ಕೊಡಕರ ಪೊಲೀಸ್ ಠಾಣೆಗೆ ಮಧ್ಯಾಹ್ನ 1:30 ರ ಸುಮಾರಿಗೆ ಡೊಮಿನಿಕ್ ಮಾರ್ಟಿನ್ ಶರಣಾಗಿದ್ದಾನೆ. ಬಾಂಬ್ ಇಟ್ಟಿರುವುದಾಗಿ ತಿಳಿಸಿದ್ದಾನೆ. ಆತನನ್ನು ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. ಪ್ರಾಥಮಿಕ ವಿಚಾರಣೆಯಲ್ಲಿ ವ್ಯತಿರಿಕ್ತ ಹೇಳಿಕೆ ನೀಡಿದ್ದಾನೆ. ಹೀಗಾಗಿ ಹೆಚ್ಚಿನ ವಿಚಾರಣೆ ನಡೆಸಲು ಪೊಲೀಸರು ನಿರ್ಧರಿಸಿದ್ದಾರೆ. ಎಡಿಜಿಪಿ ನೇತೃತ್ವದಲ್ಲಿ ಉನ್ನತ ಮಟ್ಟದ ಅಧಿಕಾರಿಗಳು ಕೂಡ ಶೀಘ್ರವೇ ಕೊಡಕರ ಠಾಣೆಗೆ ಭೇಟಿ ನೀಡಲಿದ್ದಾರೆ ಎಂದು ತಿಳಿದು ಬಂದಿದೆ.
ಮತ್ತೊಂದೆಡೆ, ಸರಣಿ ಸ್ಫೋಟದ ದುಷ್ಕರ್ಮಿಗಳು ಬಳಸಿದ್ದ ಶಂಕಿತ ನೀಲಿ ಕಾರನ್ನು ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಇದರ ತನಿಖೆಯಲ್ಲಿ ಪೊಲೀಸರಿಗೆ ನಿರ್ಣಾಯಕ ಮಾಹಿತಿಯೂ ಸಿಕ್ಕಿದೆ. ಇದೇ ಕಾರಿನಲ್ಲಿ ಪ್ರಾರ್ಥನಾ ಸಭೆ ನಡೆಯುತ್ತಿದ್ದ ಕನ್ವೆನ್ಷನ್ ಸೆಂಟರ್‌ಗೆ ದುಷ್ಕರ್ಮಿಗಳು ಬಂದಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ. ಘಟನೆಯ ನಂತರ ಪೊಲೀಸರಿಗೆ ಸಿಕ್ಕ ಮಹತ್ವದ ಸಾಕ್ಷ್ಯ ಈ ಕಾರು ಆಗಿದೆ. ಕಾರಿನ ನಂಬರ್ ಕುರಿತು ಪೊಲೀಸರು ಪರಿಶೀಲಿಸಿದ್ದಾರೆ.
ಈ ಕುರಿತು ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಎಂ.ಆರ್. ಅಜಿತ್ ಕುಮಾರ್ ಮಾಧ್ಯಮದವರೊಂದಿಗೆ ಮಾತನಾಡಿ, ಈಗ ಪೊಲೀಸರಿಗೆ ಶರಣಾಗಿರುವ ಡೊಮಿನಿಕ್ ಮಾರ್ಟಿನ್ ತನ್ನ ಹೇಳಿಕೆಯನ್ನು ಬೆಂಬಲಿಸುವ ಸಾಕ್ಷ್ಯ ನೀಡಿದ್ದಾನೆ. ನಾವು ಪ್ರಸ್ತುತ ಅದನ್ನು ಪರಿಶೀಲಿಸುತ್ತಿದ್ದೇವೆ. ಅಲ್ಲದೇ, ಈ ಕೃತ್ಯವನ್ನು ನಡೆಸಲು ನೀಡಿದ ಕಾರಣಗಳನ್ನು ಸಹ ಪರಿಶೀಲಿಸುತ್ತಿದ್ದೇವೆ ಎಂದು ಎಡಿಜಿಪಿ ಹೇಳಿದ್ದಾರೆ.
ಇದಕ್ಕೂ ಮುನ್ನ ರಾಜ್ಯ ಪೊಲೀಸ್ ಮುಖ್ಯಸ್ಥ ಶೇಕ್ ದರ್ವೇಶ್ ಸಾಹೇಬ್ ತಿರುವನಂತಪುರದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ಪ್ರಾಥಮಿಕ ತನಿಖೆಯ ಪ್ರಕಾರ, ಐಇಡಿಯಿಂದಾಗಿ ಸ್ಫೋಟಗಳು ಸಂಭವಿಸಿವೆ. ನಾವು ಅದನ್ನು ಪರಿಶೀಲಿಸುತ್ತಿದ್ದೇವೆ ಎಂದು ಹೇಳಿದ್ದರು.
ಇದನ್ನೂ ಓದಿ: ಕೇರಳ: ಪ್ರಾರ್ಥನಾ ಸಭೆಯಲ್ಲಿ ಸ್ಫೋಟ: ಓರ್ವ ಸಾವು, 20ಕ್ಕೂ ಹೆಚ್ಚು ಜನರಿಗೆ ಗಾಯ