ನವದೆಹಲಿ: ದೇಶದಾದ್ಯಂತ ಕೊರೊನಾ ತಡೆಗಟ್ಟಲು ಲಸಿಕೆ ವಿತರಣೆ ಕಾರ್ಯಕ್ಕೆ ಭರದ ಸಿದ್ಧತೆಗಳು ನಡೆಯುತ್ತಿದೆ. ಇನ್ನೇನು ಕೆಲ ದಿನಗಳಲ್ಲಿ ಜನತೆಗೆ ಲಸಿಕೆ ಲಭ್ಯವಾಗಲಿದ್ದು, ಈ ಕುರಿತು ಆಯಾ ರಾಜ್ಯಗಳು ತಯಾರಿ ನಡೆಸಿವೆ.
ಇದೀಗ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಸಹ ಲಸಿಕೆ ವಿತರಣೆಗೆ ಆರೋಗ್ಯ ಇಲಾಖೆ ಅಧಿಕಾರಿಗಳು, ಆಸ್ಪತ್ರೆಯ ಮುಖ್ಯಸ್ಥರು, ಎಲ್ಲಾ ಜಿಲ್ಲಾಧಿಕಾರಿಗಳೊಂದಿಗೆ ಪರಿಶೀಲನಾ ಸಭೆ ನಡೆಸಲಿದ್ದಾರೆ.
ಜನವರಿ 16ರಿಂದ ದೇಶದಲ್ಲಿ ಲಸಿಕೆ ವಿತರಿಸಲು ನಿರ್ಧರಿಸಲಾಗಿದ್ದು, ಈ ಹಿನ್ನೆಲೆ 11 ಗಂಟೆಗೆ ಪೂರ್ವ ತಯಾರಿ ಸಭೆ ನಡೆಸಲು ತೀರ್ಮಾನಿಸಿದ್ದಾರೆ. ಇದಲ್ಲದೇ ಕೇಂದ್ರ ಸರ್ಕಾರ ಜನತೆಗೆ ಉಚಿತ ಕೊರೊನಾ ಲಸಿಕೆ ನೀಡಲು ವಿಫಲವಾದರೆ ನಾವು ದೆಹಲಿ ಜನತೆಗೆ ಉಚಿತವಾಗಿ ಲಸಿಕೆ ನೀಡುತ್ತೇವೆ ಎಂದು ನಿನ್ನೆ ಹೇಳಿಕೆ ನೀಡಿದ್ದರು.
ಕೋವಿಡ್ನಿಂದ ಮೃತಪಟ್ಟಿದ್ದ ವೈದ್ಯ ಹಿತೇಶ್ ಗುಪ್ತಾ ಅವರ ನಿವಾಸಕ್ಕೆ ಭೇಟಿ ನೀಡಿದ್ದ ವೇಳೆ ಮಾತನಾಡಿದ್ದ ಕೇಜ್ರಿವಾಲ್, ಕೊರೊನಾ ಲಸಿಕೆ ಕುರಿತು ಸುಳ್ಳು, ವದಂತಿ ಹಬ್ಬಿಸಬಾರದೆಂದು ನಾನು ಎಲ್ಲರಲ್ಲೂ ಮನವಿ ಮಾಡುತ್ತೇನೆ. ಕೇಂದ್ರ ಸರ್ಕಾರ ಎಲ್ಲರಿಗೂ ಉಚಿತವಾಗಿ ಲಸಿಕೆ ನೀಡಬೇಕು, ಅದು ಸಾಧ್ಯವಾಗದಿದ್ದರೆ ದೆಹಲಿ ಜನತೆಗೆ ನಾವೇ ಉಚಿತವಾಗಿ ನೀಡುತ್ತೇವೆ ಎಂದಿದ್ದರು.
ಈ ವೇಳೆ ವೈದ್ಯ ಗುಪ್ತಾ ಅವರ ಕುಟುಂಬಸ್ಥರಿಗೆ 1 ಕೋಟಿ ರೂಪಾಯಿ ಪರಿಹಾರ ನೀಡುವ ಭರವಸೆ ನೀಡಿದ್ದಾರೆ.
ಇದನ್ನೂ ಓದಿ: ದೇಶದ ಜನರಿಗೆ ಮಕರ ಸಂಕ್ರಾಂತಿ ಶುಭಾಶಯ ಕೋರಿದ ಪ್ರಧಾನಿ ಮೋದಿ