ನವದೆಹಲಿ: ಭಾರತದಲ್ಲೇ ತಯಾರಿಸಿದ ಕೋವಿಡ್-19 ಲಸಿಕೆಗಳನ್ನು ತುರ್ತು ಬಳಕೆಗೆ ಅನುಮೋದಿಸಿರುವುದರಿಂದ ಕೊರೊನಾ ವಿರುದ್ಧದ ಹೋರಾಟಕ್ಕೆ ಸಕಾರಾತ್ಮಕ ದಿಕ್ಕು ಸಿಗಲಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.
ಎಲ್ಲ ದೇಶವಾಸಿಗಳಿಗೆ ಅಭಿನಂದನೆಗಳು. ಭಾರತದಲ್ಲಿ ತಯಾರಿಸಲಾದ ಎರಡು ಲಸಿಕೆಗಳ ತುರ್ತು ಬಳಕೆಗೆ ಡಿಸಿಜಿಐ ಅನುಮೋದಿಸಿದೆ. ಕೊರೊನಾ ವೈರಸ್ ವಿರುದ್ಧ ದೇಶ ನಡೆಸುತ್ತಿರುವ ಹೋರಾಟಕ್ಕೆ ಇದರಿಂದ ಸಕಾರಾತ್ಮಕ ದಿಕ್ಕು ಸಿಗಲಿದೆ. ಈ ಹಂತಕ್ಕೆ ತಲುಪಲು ಸಹಾಯ ಮಾಡಿರುವ ವಿಜ್ಞಾನಿಗಳು ಮತ್ತು ವೈದ್ಯರಿಗೆ ಧನ್ಯವಾದ ಎಂದಿದ್ದಾರೆ.
ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ) ಪ್ರಾಧಿಕಾರವು ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಮತ್ತು ಭಾರತ್ ಬಯೋಟೆಕ್ನ ಕೋವಿಡ್ -19 ಲಸಿಕೆಗಳನ್ನು ಅನುಮೋದಿಸಿದೆ.
ಈವರೆಗೆ ದೇಶದಲ್ಲಿ 1.49 ಲಕ್ಷಕ್ಕೂ ಹೆಚ್ಚು ಜೀವಗಳನ್ನು ಬಲಿ ಪಡೆದಿರುವ ಕೊರೊನಾ ವಿರುದ್ಧ ಭಾರಿ ಪ್ರಮಾಣದಲ್ಲಿ ಹೋರಾಡಲು ಲಸಿಕಾಕರಣಕ್ಕೆ ಚಾಲನೆ ನೀಡಲಾಗುತ್ತಿದೆ.