ನವದೆಹಲಿ: ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ನವೆಂಬರ್ 14ರಂದು ದೀಪಾವಳಿ ಆಚರಿಸುವಂತೆ ಜನತೆಗೆ ಕರೆ ನೀಡಿದ್ದ ಬೆನ್ನಲ್ಲೇ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಕಿಡಿಕಾರಿದ್ದಾರೆ.
ಹಿಂದೂಗಳನ್ನು ವಿರೋಧಿಸುವ ಮೂಲಕ ರಾಜಕೀಯದಲ್ಲಿ ಇರಲು ಸಾಧ್ಯವಿಲ್ಲ ಎಂಬುದನ್ನು ದೆಹಲಿ ಮುಖ್ಯಮಂತ್ರಿ ಕೊನೆಗೂ ಅರಿತುಕೊಂಡಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಅಣ್ಣಾ ಹಜಾರೆಯರೊಂದಿಗಿನ ಆಂದೋಲನದ ವೇಳೆ ವೇದಿಕೆ ಮೇಲೆ ಭಾರತ ಮಾತೆಯ ಚಿತ್ರ ಇಡಲು ಹಿಂದು ಮುಂದು ನೋಡಿದವರು ಇಂದು ದೀಪಾವಳಿ ಆಚರಣೆಗೆ ಸಂಪುಟ ಸಚಿವರ ಜೊತೆ ದೇವಾಲಯಗಳಿಗೆ ಓಡಾಡುತ್ತಿದ್ದಾರೆ. ಹಿಂದೂಗಳನ್ನು ವಿರೋಧಿಸುವ ಮೂಲಕ, ಹಿಂದೂಗಳ ನಂಬಿಕೆಯನ್ನು ಅವಮಾನಿಸುವ ಮೂಲಕ ರಾಜಕೀಯದಲ್ಲಿ ನೆಲೆಯೂರಲು ಸಾಧ್ಯವಿಲ್ಲ ಎಂಬುದನ್ನು ಅರಿತಿದ್ದಾರೆ. ಇದು ವಾಸ್ತವ ರಾಜಕೀಯ ಎಂದರು.
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ದೆಹಲಿಯ ಆದರ್ಶ್ ನಗರದ ಕಾಲೋನಿಯಲ್ಲಿ ಪಾಕಿಸ್ತಾನದಿಂದ ಬಂದಿರುವ ನಿರಾಶ್ರಿತರ ಜೊತೆ ದೀಪಾವಳಿ ಹಬ್ಬ ಆಚರಣೆ ಸಂಭ್ರಮದಲ್ಲಿ ಭಾಗಿಯಾಗಿದ್ದಾರೆ.
ಕಳೆದ ಡಿಸೆಂಬರ್ನಲ್ಲಿ ಜಾರಿಯಾದ ಸಿಎಎ ಬಳಿಕ ಪಾಕಿಸ್ತಾನದಿಂದ ಬಂದ ನಿರಾಶ್ರಿತರು ಭಾರತದಲ್ಲಿ ಈಗ ಸುರಕ್ಷಿತರಾಗಿದ್ದಾರೆ. ಅವರ ಜೀವನವೀಗ ಬದಲಾಗಿದೆ ಎಂದಿದ್ದಾರೆ.