ಹೈದರಾಬಾದ್: ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರ ಪುತ್ರಿ ಹಾಗೂ ಟಿಆರ್‌ಎಸ್ ಎಂಎಲ್‌ಸಿ ಕೆ. ಕವಿತಾ, ಬಿಜೆಪಿ ನಾಯಕರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಎಚ್ಚರಿಕೆ ನೀಡಿದ್ದಾರೆ. ಬಿಜೆಪಿಯವರು ನನ್ನ ವಿರುದ್ಧ ಮಾಡಿರುವ ಆರೋಪಗಳೆಲ್ಲವೂ ನಿರಾಧಾರ ಎಂಬುದನ್ನು ಸ್ಪಷ್ಟಪಡಿಸಲು ಬಯಸುತ್ತೇನೆ. ದೆಹಲಿ ಅಬಕಾರಿ ನೀತಿಯ ತನಿಖೆಗೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ಕವಿತಾ ಹೇಳಿದ್ದಾರೆ. ದೆಹಲಿ ಅಬಕಾರಿ ನೀತಿ ಹಗರಣದಲ್ಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಮತ್ತು ಕೆಸಿಆರ್ ಪುತ್ರಿ ಕವಿತಾ ಪ್ರಮುಖ ಪಾತ್ರ ಹೊಂದಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.
ಬಿಜೆಪಿ ನಮ್ಮ ಕುಟುಂಬದ ಪ್ರತಿಷ್ಠೆಗೆ ಧಕ್ಕೆ ತರಲು ಯತ್ನಿಸುತ್ತಿದೆ. ಕೇಂದ್ರದ ಕೈಯಲ್ಲಿ ಎಲ್ಲಾ ತನಿಖಾ ಸಂಸ್ಥೆಗಳಿವೆ. ಹೀಗಾಗಿ ಅವರು ಏನು ಬೇಕಾದರೂ ಮಾಡುತ್ತಾರೆ ಎಂದು ಟಿಆರ್‌ಎಸ್ ಎಂಎಲ್‌ಸಿ ಕವಿತಾ ದೂರಿದ್ದಾರೆ. ತೆಲಂಗಾಣಕ್ಕಾಗಿ ಹೋರಾಟ ಮಾಡಿದವರು ನಾವು ಯಾವುದಕ್ಕೂ ಹೆದರಲ್ಲ ಎಂದಿರುವ ಕವಿತಾ, ಬಿಜೆಪಿ ಸಂಸದ ಪರ್ವೇಶ್ ವರ್ಮಾ ಮತ್ತು ಬಿಜೆಪಿಯ ಮಾಜಿ ಶಾಸಕ ಮಂಜಿಂದರ್ ಸಿಂಗ್ ಸಿರ್ಸಾ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಗುಡುಗಿದ್ದಾರೆ.
ದೆಹಲಿಯಲ್ಲಿ ಮದ್ಯ ಮಾರಾಟಕ್ಕೆ ಸಂಬಂಧಿಸಿದಂತೆ ಅಬಕಾರಿ ನೀತಿ ರೂಪಿಸಲು ಕೆಸಿಆರ್ ಕುಟುಂಬದ ಸದಸ್ಯರು ದೆಹಲಿಯ ಪಂಚತಾರ ಹೋಟೆಲ್‌ನಲ್ಲಿ ಸಭೆ ನಡೆಸಿದ್ದರು. ಈ ಸಭೆಗೆ ಬುಕ್ ಮಾಡಲಾದ ಸೂಟ್ಗಳು ಕೆಸಿಆರ್ ಕಡೆಯಿಂದ ಬುಕ್ ಆಗಿದ್ದವು ಎಂದು ಬಿಜೆಪಿ ಸಂಸದ ಪರ್ವೇಶ್ ವರ್ಮಾ ಇತ್ತೀಚೆಗೆ ಆರೋಪಿಸಿದ್ದರು.