ಕಾನ್ಪುರ್ ದೇಹತ್ (ಉತ್ತರಪ್ರದೇಶ): ರೈತನೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ಪ್ರದೇಶದ ಕಾನ್ಪುರ್ ದೇಹತ್ ಜಿಲ್ಲೆಯ ರಸೂಲಾಬಾದ್ನಲ್ಲಿ ನಡೆದಿದೆ. ಸಾವಿಗೂ ಮುನ್ನ ರೈತ ಬರೆದ ಡೆತ್ ನೋಟ್ ಪತ್ತೆಯಾಗಿದೆ. ತನ್ನ ಕೃಷಿ ಭೂಮಿಯಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಯಿಂದ ಬೇಸತ್ತು ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಆ ರೈತ ಬರೆದಿಟ್ಟಿದ್ದಾನೆ.
ಇಂದರ್‌ಪಾಲ್ ಸಿಂಗ್ ಭಡೋರಿಯಾ ಎಂಬ ರೈತನೇ ಸಾವಿಗೆ ಶರಣಾಗಿದ್ದು, ಇಲ್ಲಿನ ದೇವಸ್ಥಾನದ ಬಳಿ ಮೃತದೇಹ ಪತ್ತೆಯಾಗಿದೆ. ಮೃತನ ಕುಟುಂಬಸ್ಥರು ಸ್ಥಳಕ್ಕೆ ಧಾವಿಸಿ ನೋಡಿದಾಗ ಅಲ್ಲಿ ಡೆತ್ನೋಟ್ ಪತ್ತೆಯಾಗಿದೆ. ಇದರಿಂದ ರಸೂಲಾಬಾದ್-ಜಿನ್‌ಜಾಕ್ ಮುಖ್ಯ ರಸ್ತೆಯಲ್ಲಿ ಸಂಚಾರ ತಡೆ ನಡೆಸಿ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಯಾರಿಂದ ಭೂಮಿ ಒತ್ತುವರಿ?: ರೈತ ಇಂದರ್‌ಪಾಲ್ ಸಿಂಗ್ ಡೆತ್ನೋಟ್ ಪ್ರಕಾರ ರಸೂಲಾಬಾದ್ ನಗರ ಪಂಚಾಯಿತಿಯು ಕೃಷಿ ಭೂಮಿಯನ್ನು ಒತ್ತುವರಿ ಮಾಡಿಕೊಂಡಿದೆ. ಅದೇ ಭೂಮಿಯಲ್ಲಿ ಅಕ್ರಮ ಗಣಿಗಾರಿಕೆ ನಡೆಸುತ್ತಿದೆ. ನಗರ ಪಂಚಾಯಿತಿ ಅಧ್ಯಕ್ಷರೇ ಬಲವಂತಾಗಿ ನನ್ನ ಭೂಮಿಯನ್ನು ವಶಕ್ಕೆ ಪಡೆದು ಗಣಿಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಡೆತ್ನೋಟ್ನಲ್ಲಿ ರೈತ ಆರೋಪಿಸಿದ್ದಾರೆ.
ಮೂಲಗಳ ಪ್ರಕಾರ ಎರಡು ಡೆತ್ನೋಟ್ಗಳನ್ನು ರೈತ ಬರೆದಿಟ್ಟಿದ್ದಾನೆ. ಒಂದು ಪೊಲೀಸ್ ಠಾಣೆಗೆ ಮತ್ತು ಇನ್ನೊಂದು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದಾನೆ. ನನ್ನ ಕೃಷಿ ಭೂಮಿ ಬಗ್ಗೆ ಎಲ್ಲ ದಾಖಲೆಗಳು ಇವೆ. ಅಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಯಿಂದ ಮುಂದೆ ನನ್ನ ಕುಟುಂಬಕ್ಕೂ ತೊಂದರೆಯಾಗಬಾರದು ಎಂದು ಅದರಲ್ಲಿ ಉಲ್ಲೇಖಿಸಿದ್ದಾನೆ ಎಂದು ತಿಳಿದು ಬಂದಿದೆ.
ಅಲ್ಲದೇ, ಕೃಷಿ ಭೂಮಿ ಒತ್ತುವರಿ ಮತ್ತು ಅಕ್ರಮ ಗಣಿಗಾರಿಕೆ ಬಗ್ಗೆ ತಹಶೀಲ್ದಾರ್ರಿಂದ ಜಿಲ್ಲಾಮಟ್ಟದ ಅಧಿಕಾರಿಗಳಿಗೆ ಹಲವು ಬಾರಿ ದೂರು ನೀಡಲಾಗಿತ್ತು. ಆದರೂ, ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿರಲಿಲ್ಲ ಎಂದು ಕುಟುಂಬಸ್ಥರು ಕೂಡ ಆರೋಪಿಸಿದ್ದಾರೆ.
ಆರು ಜನರ ವಿರುದ್ಧ ಕೇಸ್: ಈ ಬಗ್ಗೆ ಪ್ರತಿಕ್ರಿಯಿಸಿರುವ ಸಿಪಿಐ ಆಶಾಪಾಲ್ ಸಿಂಗ್, ರೈತನ ಸಾವಿನ ಬಗ್ಗೆ ತನಿಖೆ ನಡೆಸಲಾಗುತ್ತದೆ. ಮರಣೋತ್ತರ ಪರೀಕ್ಷೆಯ ವರದಿ ಆಧರಿಸಿ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ. ಜತೆಗೆ ಈ ಘಟನೆ ಸಂಬಂಧ ಕಾರ್ಯನಿರ್ವಹಣಾಧಿಕಾರಿ ದಿನೇಶ್ ಶುಕ್ಲಾ, ಹಿರಿಯ ಗುಮಾಸ್ತ ಅಮಿತ್ ಕುಮಾರ್, ಅಧ್ಯಕ್ಷ ರಾಜಧಾನಿ ಹಾಗೂ ಅಕ್ವೀಲ್ ಅಹ್ಮದ್, ಮೋಹಿನ್, ಆನಂದ್ ಖರೆ ಸೇರಿದಂತೆ ಆರು ಜನರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಅಖಿಲೇಶ್ ಯಾದವ್ ಖಂಡನೆ: ರೈತನ ಸಾವಿನ ಘಟನೆ ಖಂಡಿಸಿರುವ ಸಮಾಜವಾದಿ ಪಕ್ಷದ ಅಧ್ಯಕ್ಷ, ಉತ್ತರ ಪ್ರದೇಶದ ಪ್ರತಿಪಕ್ಷ ನಾಯಕ ಅಖಿಲೇಶ್ ಯಾದವ್, ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ನಗರ ಪಂಚಾಯಿತಿಯವರೇ ಜಮೀನಿನಲ್ಲಿ ಗಣಿಗಾರಿಕೆ ನಡೆಸುತ್ತಿರುವುದನ್ನು ವಿರೋಧಿಸಿ ರೈತ ಆತ್ಮಹತ್ಯೆ ಮಾಡಿಕೊಂಡಿರುವುದು ಬಹಳ ದುಃಖದ ಸಂಗತಿ. ಸಂತ್ರಸ್ತ ಕುಟುಂಬಕ್ಕೆ ಸರ್ಕಾರ ತಕ್ಷಣವೇ ಪರಿಹಾರ ಮತ್ತು ನ್ಯಾಯ ದೊರಕಿಸಿಕೊಡಬೇಕೆಂದು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಪೋಸ್ಟ್ ವೆಡ್ಡಿಂಗ್ ಫೋಟೋಶೂಟ್ ದುರಂತ: ನದಿಯಲ್ಲಿ ಮುಳುಗಿ ಮದುಮಗ ಸಾವು, ಮದುಮಗಳ ಸ್ಥಿತಿ ಚಿಂತಾಜನಕ!