ಹೈದರಾಬಾದ್: 22 ವರ್ಷದ ನಟಿಯೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ತೆಲಂಗಾಣದ ಬಂಜಾರ ಹಿಲ್ಸ್ನಲ್ಲಿ ನಡೆದಿದೆ. ಮೃತ ಯುವತಿಯನ್ನು ಅನುರಾಧಾ ಎಂದು ಗುರುತಿಸಲಾಗಿದೆ.
ಪೊಲೀಸರು ತಿಳಿಸಿರುವಂತೆ, ಅನುರಾಧಾ ಅವರು ಬಂಜಾರಹಿಲ್ಸ್ನ ಫಿಲ್ಮ್ ನಗರದಲ್ಲಿ ಕಿರಣ್ ಎಂಬ ವ್ಯಕ್ತಿಯ ಜೊತೆ ವಾಸವಾಗಿದ್ದು, ತೆಲುಗು ಚಿತ್ರಗಳಲ್ಲಿ ಜೂನಿಯರ್ ಆರ್ಟಿಸ್ಟ್ ಆಗಿ ಕೆಲಸ ಮಾಡುತ್ತಿದ್ದರು. ಈಕೆಯ ಜೊತೆ ಕೆಲಸ ಮಾಡ್ತಿದ್ದ ಕಿರಣ್ ಎಂಬವರನ್ನು ಕಳೆದ ಆರು ವರ್ಷಗಳಿಂದ ಪ್ರೀತಿಸುತ್ತಿದ್ದರು. ಇಬ್ಬರು ಮದುವೆ ಮಾಡಿಕೊಳ್ಳಬೇಕೆಂದು ನಿರ್ಧರಿಸಿದ್ದರು. ಹೀಗಾಗಿ ಕಳೆದ ಮೂರು ತಿಂಗಳಿಂದ ಇಬ್ಬರು ಒಟ್ಟಿಗೆ ಜೀವನ ನಡೆಸುತ್ತಿದ್ದರು. ಆದರೆ ಕಳೆದ ಕೆಲ ದಿನಗಳ ಹಿಂದೆ ಕಿರಣ್, ಅನುರಾಧಾ ಜೊತೆಗಿನ ಸಂಬಂಧ ಕಡಿದುಕೊಂಡಿದ್ದ. ಹೀಗಾಗಿ ಆಕೆ ಮಾನಸಿಕ ಖಿನ್ನತೆಗೊಳಗಾಗಿದ್ದರು ಎಂದು ತಿಳಿದು ಬಂದಿದೆ.
ಮಂಗಳವಾರ ರಾತ್ರಿ ಅನುರಾಧಾ ಮನೆ ಕೊಠಡಿಯ ಫ್ಯಾನ್ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇಂದು ಆಕೆಯ ವಾಸವಾಗಿದ್ದ ಕೋಣೆಯಿಂದ ದುರ್ವಾಸನೆ ಬರಲು ಶುರುವಾಗಿದ್ದು, ಪಕ್ಕದ ಮನೆಯವರು ನೀಡಿರುವ ಮಾಹಿತಿ ಆಧಾರದ ಮೇಲೆ ಪೊಲೀಸರು ಸ್ಥಳಕ್ಕಾಗಮಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಇದನ್ನೂ ಓದಿ: ಡೆತ್ನೋಟ್ ಬರೆದಿಟ್ಟು ನಟಿ ಸೌಜನ್ಯ ಆತ್ಮಹತ್ಯೆ
ಪೋಷಕರನ್ನು ವಿಚಾರಣೆ ನಡೆಸಿದಾಗ ಕಿರಣ್ ಎಂಬ ವ್ಯಕ್ತಿಯನ್ನು ಕಳೆದ ಆರು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಮದುವೆಯಾಗುವುದಾಗಿ ನಂಬಿಸಿ, ಯುವತಿಯನ್ನು ತನ್ನೊಟ್ಟಿಗೆ ಇರಿಸಿಕೊಂಡಿದ್ದ ಎಂದು ಆರೋಪಿಸಿದ್ದಾರೆ. ಈ ಮಧ್ಯೆ ಕಿರಣ್ ತಮಗೆ ಗೊತ್ತಿಲ್ಲದೆ ಬೇರೆ ಯುವತಿ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾಗಿ ದೂರಿದ್ದಾರೆ.