ನವ ದೆಹಲಿ: ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಜಾರ್ಖಂಡ್ ಹೈಕೋರ್ಟ್‌ನ ಆದೇಶ ಪ್ರಶ್ನಿಸಿ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೋರೆನ್ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಇಂದು ವಿಚಾರಣೆಗೆ ಅಂಗೀಕರಿಸಿದೆ. ಅಕ್ರಮ ಗಣಿಗಾರಿಕೆ ಆರೋಪದ ಪ್ರಕರಣದಲ್ಲಿ ಸೋರೆನ್ ವಿರುದ್ಧ ತನಿಖೆ ನಡೆಸುವಂತೆ ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯು (ಪಿಐಎಲ್) ವಿಚಾರಣೆಗೆ ಅರ್ಹ ಎಂದು ಹೈಕೋರ್ಟ್ ಹೇಳಿತ್ತು.
2021 ರಲ್ಲಿ ಅಧಿಕಾರದಲ್ಲಿದ್ದಾಗ ತಮಗೆ ತಾವೇ ಗಣಿ ಗುತ್ತಿಗೆ ಪಡೆದುಕೊಂಡಿದ್ದ ಪ್ರಕರಣದಲ್ಲಿ, ಬಿಜೆಪಿ ಚುನಾವಣಾ ಆಯೋಗಕ್ಕೆ ದೂರು ನೀಡಿದೆ. ಈ ದೂರಿನ ಮೇರೆಗೆ ಸೋರೆನ್ ಶಾಸಕ ಸ್ಥಾನದಿಂದ ಅನರ್ಹರಾಗುವ ಭೀತಿ ಎದುರಿಸುತ್ತಿದ್ದಾರೆ. ಚುನಾವಣಾ ಆಯೋಗವು ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ರಾಜ್ಯಪಾಲ ರಮೇಶ್ ಬೈಸ್‌ಗೆ ಶಿಫಾರಸು ಮಾಡಿದೆ ಎಂದು ವರದಿಯಾಗಿದೆ. ಆಯೋಗದ ಪತ್ರವನ್ನು ತಕ್ಷಣವೇ ತೆರೆಯುವಂತೆ ಸೊರೆನ್ ಕೇಳಿಕೊಂಡಿದ್ದರೂ ರಾಜ್ಯಪಾಲರು ಈ ಬಗ್ಗೆ ಯಾವುದೇ ನಿರ್ಧಾರ ತಳೆದಿಲ್ಲ.
ಈ ಪ್ರಕರಣದಲ್ಲಿ ಈ ಹಿಂದೆ ಜಾರಿ ನಿರ್ದೇಶನಾಲಯವು ಮುಖ್ಯಮಂತ್ರಿ ಹೇಮಂತ್ ಸೋರೆನ್ ಅವರ ಸಹಾಯಕ ಪಂಕಜ್ ಮಿಶ್ರಾ ಮತ್ತು ಇತರ ಇಬ್ಬರನ್ನು ಬಂಧಿಸಿತ್ತು. ಜುಲೈನಲ್ಲಿ ದಾಳಿ ನಡೆಸಿ ಮಿಶ್ರಾ ಅವರ ಬ್ಯಾಂಕ್ ಖಾತೆಗಳಿಂದ 11.88 ಕೋಟಿ ರೂಪಾಯಿ ವಶಪಡಿಸಿಕೊಂಡ ನಂತರ ಇಡಿ ಈ ಕ್ರಮ ಕೈಗೊಂಡಿತ್ತು. ಮಿಶ್ರಾ ಅವರ ಮನೆಯಲ್ಲಿ 5.34 ಕೋಟಿ ರೂಪಾಯಿ ಲೆಕ್ಕ ರಹಿತ ನಗದು ಪತ್ತೆಯಾಗಿದೆ ಎಂದು ಇಡಿ ಹೇಳಿದೆ. ಮೂರು ತಿಂಗಳ ಹಿಂದೆ ಸೋರೆನ್ ಅವರ ಮಾಧ್ಯಮ ಸಲಹೆಗಾರ ಅಭಿಷೇಕ್ ಪ್ರಸಾದ್ ಅವರನ್ನೂ ಇಡಿ ಪ್ರಶ್ನಿಸಿತ್ತು. ಪ್ರಕರಣದ ಪ್ರಮುಖ ಆರೋಪಿಯಾಗಿರುವ ಮಿಶ್ರಾ ಅವರ ಮನೆಯಿಂದ ಹೇಮಂತ್ ಸೋರೆನ್ ಅವರ ಪಾಸ್‌ಬುಕ್ ಮತ್ತು ಅವರು ಸಹಿ ಮಾಡಿದ ಕೆಲವು ಚೆಕ್‌ಗಳನ್ನು ಇಡಿ ವಶಪಡಿಸಿಕೊಂಡಿದೆ ಎಂದು ವರದಿಯಾಗಿದೆ.
ಹೇಮಂತ್ ಸೋರೆನ್ ಅವರ ರಾಜಕೀಯ ಸಹಾಯಕನಾಗಿರುವ ಪಂಕಜ್ ಮಿಶ್ರಾ ತಮ್ಮ ಸಹಚರರ ಮೂಲಕ ಮುಖ್ಯಮಂತ್ರಿಗಳ ವಿಧಾನಸಭಾ ಕ್ಷೇತ್ರ ಬರ್ಹೈತ್‌ನಲ್ಲಿ ಅಕ್ರಮ ಗಣಿಗಾರಿಕೆ ವ್ಯವಹಾರ ನಿಯಂತ್ರಿಸುತ್ತಿದ್ದಾರೆ ಎಂದು ಇಡಿ ಚಾರ್ಜ್‌ಶೀಟ್‌ನಲ್ಲಿ ಹೇಳಿದೆ.
ಇದನ್ನೂ ಓದಿ: ದೆಹಲಿಗೆ ಅಂಡರ್ವೇರ್ ಖರೀದಿಸಲು ಹೋಗಿದ್ದೆ: ಜಾರ್ಖಂಡ್ ಸಿಎಂ ಸಹೋದರನ ಅಚ್ಚರಿ ಹೇಳಿಕೆ