ಅಮರಾವತಿ: ವೈದ್ಯಕೀಯ ವಿದ್ಯಾರ್ಥಿಗಳು ಜೀನ್ಸ್ ಪ್ಯಾಂಟ್ ಮತ್ತು ಟೀ ಶರ್ಟ್ ಧರಿಸಬಾರದು ಎಂದು ಆಂಧ್ರ ಪ್ರದೇಶ ರಾಜ್ಯ ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯ (ಡಿಎಂಇ) ಆದೇಶ ಹೊರಡಿಸಿದೆ. ಅಲ್ಲದೇ ಸಹಾಯಕರು, ಸಹೋದ್ಯೋಗಿಗಳು, ಪ್ರಾಧ್ಯಾಪಕರು ಮತ್ತು ವೈದ್ಯಕೀಯ ವಿದ್ಯಾರ್ಥಿಗಳು ಸೀರೆ ಅಥವಾ ಚೂಡಿದಾರ್‌ಗಳನ್ನು ಮಾತ್ರ ಧರಿಸುವಂತೆಯೂ ಸೂಚಿಸಿದೆ.
ಕೆಲವು ವಿದ್ಯಾರ್ಥಿಗಳು, ವೈದ್ಯರು ಮತ್ತು ಅರೆವೈದ್ಯಕೀಯ ಸಿಬ್ಬಂದಿ ನಿಗದಿತ ಡ್ರೆಸ್ ಕೋಡ್ ಅನ್ನು ಅನುಸರಿಸದೇ ಇರುವುದನ್ನು ಕಂಡ ಉನ್ನತಾಧಿಕಾರಿಗಳು ಈ ರೀತಿಯ ನಿರ್ಧಾರಕ್ಕೆ ಬಂದಿದ್ದಾರೆ. ಎಂಬಿಬಿಎಸ್ ಮತ್ತು ಪಿಜಿ ವೈದ್ಯಕೀಯ ವಿದ್ಯಾರ್ಥಿಗಳು ಶುಭ್ರ ಬಟ್ಟೆ ಧರಿಸಬೇಕು. ಹಾಗೆಯೇ ಮಹಿಳೆಯರು ತಮ್ಮ ಕೂದಲು ಬಿಡುವಂತಿಲ್ಲ. ಪುರುಷರು ಗಡ್ಡ ಬೋಳಿಸಿ ಬರಬೇಕು ಎಂದು ತಿಳಿಸಲಾಗಿದೆ.
ಹಾಗೆಯೇ ಕಡ್ಡಾಯವಾಗಿ ಸ್ಟೆತಸ್ಕೋಪ್ ಮತ್ತು ಏಪ್ರನ್ ಧರಿಸಬೇಕು. ಬೋಧಕ ಆಸ್ಪತ್ರೆಗಳಿಗೆ ಬರುವ ರೋಗಿಗಳು ಒಳರೋಗಿಗಳಾಗಿ ದಾಖಲಾಗಬೇಕಾದರೆ ಅದಕ್ಕೆ ಸಹಾಯಕರು ಅಥವಾ ಸಿಬ್ಬಂದಿಗಳಿಲ್ಲ ಎಂದು ನಿರಾಕರಿಸುವಂತಿಲ್ಲ. ಇನ್ನು ಮುಂದೆ ಎಲ್ಲರಿಗೂ ಮುಖಾಧಾರಿತ ಹಾಜರಾತಿ ವ್ಯವಸ್ಥೆಯನ್ನು ಜಾರಿಗೆ ತರುವಂತೆ ಡಿಎಂಇ ಡಾ.ವಿನೋದ್ ಕುಮಾರ್ ಅವರು ಬೋಧನಾ ಆಸ್ಪತ್ರೆಗಳ ಅಧೀಕ್ಷಕರಿಗೆ ಮತ್ತು ಪ್ರಾಂಶುಪಾಲರಿಗೆ ಖಡಕ್ ಸೂಚನೆ ನೀಡಿದ್ದಾರೆ.
ಇದನ್ನೂ ಓದಿ:20ನೇ ವಯಸ್ಸಿಗೆ ಉದ್ಯಮಿ, 2 ಸಾವಿರ ಜನಕ್ಕೆ ಉದ್ಯೋಗ: ಶಬನಮ್ ಯಶೋಗಾಥೆ