ಹೈದರಾಬಾದ್ : ಟೋಕಿಯೋ ಒಲಿಂಪಿಕ್ಸ್ 2020ರಲ್ಲಿ ಜಾವೆಲಿನ್ ಎಸೆತದಲ್ಲಿ ಐತಿಹಾಸಿಕ ಚಿನ್ನದ ಪದಕ ಗೆದ್ದು ಭಾರತವೇ ಹೆಮ್ಮೆ ಪಡುವಂತೆ ಮಾಡಿದ್ದ ನೀರಜ್ ಚೋಪ್ರಾಗೆ ಇಂದು ಹುಟ್ಟು ಹಬ್ಬದ ಸಂಭ್ರಮ. ಸಾಧನೆ ಶಿಖರ ಏರಿದ ಬಂಗಾರದ ಹುಡುಗ 24ನೇ ವರ್ಷಕ್ಕೆ ಕಾಲಿಟ್ಟಿದ್ದಾನೆ.
ಸರೋಜಾ ದೇವಿ-ಸತೀಶ್ ಕುಮಾರ್ ಅವರ ಮಗನಾಗಿ 1997ರ ಡಿಸೆಂಬರ್ 24ರಂದು ಹರ್ಯಾಣ ರಾಜ್ಯದ ಪಾಣಿಪತ್ ಜಿಲ್ಲೆಯ ಖಾಂಡ್ರಾ ಗ್ರಾಮದಲ್ಲಿ ಜನಿಸಿದ ನೀರಜ್, ತಮ್ಮ ಕಲಿಕೆಯನ್ನು ಚಂಡೀಗಢದಲ್ಲಿ ಪೂರೈಸಿದರು. ಬಳಿಕ 2016ರಲ್ಲಿ ಜೂನಿಯರ್ ಕಮಿಷನ್ ಅಧಿಕಾರಿಯಾಗಿ, ಸುಬೇದಾರ್ ರ್ಯಾಂಕ್ನೊಂದಿಗೆ ಭಾರತೀಯ ಸೇನೆ ಸೇರಿದರು.
ಟೋಕಿಯೋ ಒಲಿಂಪಿಕ್ಸ್ನ ಜಾವಲಿನ್ ಥ್ರೋ ವಿಭಾಗದಲ್ಲಿ 87.58 ಮೀಟರ್ ದೂರಕ್ಕೆ ಜಾವಲಿನ್ ಎಸೆದು ಚಿನ್ನದ ಪದಕ ಪಡೆದಿದ್ದಾರೆ. ಇದರೊಂದಿಗೆ ಅಥ್ಲೆಟಿಕ್ಸ್‌ನಲ್ಲಿ ಭಾರತಕ್ಕೆ ಪದಕ ಪಡೆದ ಮೊದಲ ಆಟಗಾರ ಎನಿಸಿದ್ದಾರೆ. ಅಲ್ಲದೆ, 2017ರ ಏಷ್ಯನ್ ಚಾಂಪಿಯನ್ಶಿಪ್ನಲ್ಲಿ ಚಿನ್ನ ಗೆದ್ದಿದ್ದರು. 2018ರ ಏಷ್ಯನ್ ಗೇಮ್ಸ್‌ನಲ್ಲಿ ಕೂಡ ಚಿನ್ನದ ಪದಕ ಗೆದ್ದಿದ್ದರು. ಚೋಪ್ರಾ 2018ರ ಕಾಮನ್ವೆಲ್ತ್ ಗೇಮ್ಸ್ನಲ್ಲೂ ಚಿನ್ನದ ಪದಕ ಪಡೆದಿದ್ದರು.
ಇತ್ತೀಚೆಗೆ ರಾಷ್ಟ್ರಪತಿಗಳಾದ ರಾಮನಾಥ್ ಕೋವಿಂದ್ ಅವರು ನೀರಜ್ ಚೋಪ್ರಾಗೆ ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿ ನೀಡಿ ಗೌರವಿಸಿದರು.
ಆರೋಗ್ಯ ಸಮಸ್ಯೆ ಇದ್ದರೂ ಛಲ ಬಿಡದ ನೀರಜ್ : 2019ರಲ್ಲಿ ನೀರಜ್ ಭುಜದ ಬಿಗಿತ, ಮೊಣ ಕೈ ನೋವು ಮತ್ತು ಬೆನ್ನು ನೋವಿನಿಂದ ಬಳಲುತ್ತಿದ್ದರು. ಪರೀಕ್ಷಿಸಿದ ವೈದ್ಯರು ಶಸ್ತ್ರ ಚಿಕಿತ್ಸೆ ಅತ್ಯಗತ್ಯ ಎಂದು ತಿಳಿಸಿದ್ದರು. ಅಷ್ಟೇ ಅಲ್ಲ, ಈ ಸಮಸ್ಯೆ ಮುಂದುವರೆದರೆ ಜಾವೆಲಿನ್ ಎಸೆಯಲು ಆಗುವುದಿಲ್ಲ ಎಂದು ಎಚ್ಚರಿಸಿದರು. ಆಗ ಒಲಿಂಪಿಕ್ಸ್ ಆರಂಭವಾಗಲು ವರ್ಷ ಮಾತ್ರ ಬಾಕಿ ಉಳಿದಿತ್ತು.
ಮೈದಾನದಲ್ಲೇ ಹೆಚ್ಚು ಸಮಯ ಕಳೆಯಬೇಕಿದ್ದ ನೀರಜ್ ಚೋಪ್ರಾ ಅನಿವಾರ್ಯವಾಗಿ ಶಸ್ತ್ರ ಚಿಕಿತ್ಸೆಗೆ ಒಳಗಾಗಬೇಕಾಯಿತು. ತಿಂಗಳುಗಳ ಕಾಲ ಬೆಡ್ ಮೇಲೆ ಕಳೆದ ನೀರಜ್ ಇನ್ನೇನು ಮತ್ತೆ ಮೈದಾನಕ್ಕಿಳಿಯಬೇಕು ಅನ್ನುವಷ್ಟರಲ್ಲಿ ಕೊರೊನಾ ಲಾಕ್ಡೌನ್ ಶುರುವಾಗಿತ್ತು. ಹೀಗಾಗಿ, ನೀರಜ್ ಕೆರಿಯರ್ ಮುಗಿಯಿತು ಎಂದೇ ಎಲ್ಲರೂ ಭಾವಿಸಿದ್ದರು.
ಸೋಲೊಪ್ಪದ ಚೋಪ್ರಾ ಮೈದಾನಕ್ಕೆ : ಜಾವೆಲಿನ್ಗಾಗಿ ತನ್ನ ಜೀವನವನ್ನೇ ಮುಡಿಪಾಗಿಟ್ಟಿದ್ದ ನೀರಜ್ ಚೋಪ್ರಾ ಸೋಲೋಪ್ಪಿಕೊಳ್ಳಲು ಸಿದ್ಧರಿರಲಿಲ್ಲ. ಲಾಕ್ಡೌನ್ ಮುಗಿಯುತ್ತಿದ್ದಂತೆ ಮೈದಾನಕ್ಕಿಳಿದು ಬೆವರಿಸಿಳಿದರು. ಸತತ ಅಭ್ಯಾಸ, ಕಠಿಣ ಪರಿಶ್ರಮದೊಂದಿಗೆ ತಮ್ಮ ಹಿಂದಿನ ವೇಗವನ್ನು ಮರಳಿ ಪಡೆದರು. ಅಷ್ಟೇ ಅಲ್ಲ, ಪದಕ ಗೆಲ್ಲುವ ದೃಢ ನಿಶ್ಚಯದೊಂದಿಗೆ ಟೋಕಿಯೋ ಒಲಿಂಪಿಕ್ಸ್ ಗ್ರಾಮಕ್ಕೆ ಆಗಮಿಸಿ, ಮೊದಲ ಬಾರಿಗೆ ಜಾವೇಲಿನ್ ವಿಭಾಗದಲ್ಲಿ ಬಂಗಾರದ ಪದಕ ಗೆದ್ದು ಭಾರತದ ಕೀರ್ತಿ ಹೆಚ್ಚಿಸಿದರು.