ಚಂಡೀಗಡ: ಪಂಜಾಬ್ನ ಜಲಾಲಾಬಾದ್ನಲ್ಲಿ ನಡೆದ ಬೈಕ್ ಸ್ಫೋಟವನ್ನು ಪೊಲೀಸರು ‘ಭಯೋತ್ಪಾದಕ ಕೃತ್ಯ’ ಎಂದು ಕರೆದಿದ್ದಾರೆ. ಪ್ರಕರಣ ಸಂಬಂಧ ಬಂಧಿಸಲಾಗಿರುವ ಆರೋಪಿ ಪರ್ವಿನ್ ಕುಮಾರ್, ಭಾರತ-ಪಾಕಿಸ್ತಾನ ಗಡಿಯಿಂದ ಕೇವಲ ಮೂರು ಕಿಲೋ ಮೀಟರ್ ದೂರದಲ್ಲಿರುವ ಫಜಿಲ್ಕಾ ಜಿಲ್ಲೆಯವನು ಎಂದು ಗುರುತಿಸಲಾಗಿದೆ.
ಸೆಪ್ಟೆಂಬರ್ 15 ರಂದು ಫಜಿಲ್ಕಾದ ಜಲಾಲಾಬಾದ್ನಲ್ಲಿ ಬೈಕ್ನ ಪೆಟ್ರೋಲ್ ಟ್ಯಾಂಕ್ ಬ್ಲಾಸ್ಟ್ ಆಗಿ 22 ವರ್ಷದ ಬಲವಿಂದರ್ ಸಿಂಗ್ ಎಂಬಾತ ಮೃತಪಟ್ಟಿದ್ದ. ಜನನಿಬಿಡ ಪ್ರದೇಶದಲ್ಲಿ ಬೈಕ್ ಸ್ಫೋಟಿಸಲು ಪರ್ವಿನ್ ಕುಮಾರ್ ಸಂಚು ರೂಪಿಸಿದ್ದ ಎಂದು ತನಿಖೆಯ ವೇಳೆ ತಿಳಿದುಬಂದಿದೆ.
ಘಟನೆಯಲ್ಲಿ ಆತನ ಪಾತ್ರ ಇರುವುದು ತಿಳಿಯುತ್ತಿದ್ದಂತೆ, ಪೊಲೀಸರು ಕಾರ್ಯಾಚರಣೆ ನಡೆಸಿ ಆತನನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಿದರು. ಈ ವೇಳೆ ಬಲವಿಂದರ್ ಸಿಂಗ್ ಓಡಿಸುತ್ತಿದ್ದ ಬೈಕ್ಅನ್ನು ಜನನಿಬಿಡ ಪ್ರದೇಶದಲ್ಲಿ ನಿಲ್ಲಿಸಬೇಕೆಂದು ನಾನೇ ಸೂಚಿಸಿದ್ದೆ ಎಂದು ಪರ್ವಿನ್ ಬಾಯ್ಬಿಟ್ಟಿದ್ದಾನೆ. ಅಲ್ಲದೆ, ಸೆಪ್ಟೆಂಬರ್ 14 ರಂದು ಫಿರೋಜ್ಪುರದ ಚಂಡಿವಾಲಾ ಗ್ರಾಮದ ನಿವಾಸಿ ಸುಖ್ವಿಂದರ್ ಸಿಂಗ್ ಮನೆಯಲ್ಲಿ ಈ ಕೃತ್ಯದ ಯೋಜನೆ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾನೆ ಅಂತಾ ಐಜಿಪಿ ತಿಳಿಸಿದ್ದಾರೆ.
ಮಾಮ್‌ಡೋಟ್‌ನ ಲಖ್ಮಿರ್ ಕೆ ಹಿತ್ತರ್ ಗ್ರಾಮದ ನಿವಾಸಿ ಗುರ್‌ಪ್ರೀತ್ ಸಿಂಗ್ ಕೂಡ ಈ ಕೃತ್ಯದಲ್ಲಿ ಭಾಗಿಯಾಗಿದ್ದ ಎಂದು ತಿಳಿದುಬಂದಿದೆ. ಪರ್ವಿನ್ನಿಂದ ಸಂಗ್ರಹಿಸಿದ ಮಾಹಿತಿ ಆಧರಿಸಿ ಮೃತ ಬಲ್ವಿಂದರ್ ಸಿಂಗ್ ಸೇರಿ ನಾಲ್ವರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ. ಇನ್ನಿಬ್ಬರು ಆರೋಪಿಗಳಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದೇವೆ ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ದೀಪಕ್ ಹಿಲೋರಿ ಹೇಳಿದರು.
ಇದನ್ನೂ ಓದಿ: ಗ್ರಾಮಕ್ಕೆ ರಸ್ತೆ ಇಲ್ಲವೆಂದಿದ್ದಕ್ಕೆ ಗುಡಿಸಲಿಗೆ ಬೆಂಕಿಯಿಟ್ಟ ಕಿಡಿಗೇಡಿಗಳು!
ರೈತರೊಬ್ಬರು ನೀಡಿದ ಮಾಹಿತಿ ಮೇರೆಗೆ ಆರೋಪಿಗಳು ಹೊಲದಲ್ಲಿ ಬಚ್ಚಿಟ್ಟಿದ ಟಿಫಿನ್ ಬಾಂಬ್(Tiffin Bomb)ಅನ್ನು ವಶಪಡಿಸಿಕೊಂಡಿದ್ದಾರೆ.