ಶ್ರೀನಗರ: ದಕ್ಷಿಣ ಕಾಶ್ಮೀರದ ಶೋಪಿಯಾನ್ ಜಿಲ್ಲೆಯ ಚೌಗಾಮ್ ಗ್ರಾಮದಲ್ಲಿ ಇಂದು ಬೆಳ್ಳಂಬೆಳಗ್ಗೆ ಭದ್ರತಾ ಪಡೆಗಳು ಮತ್ತು ಉಗ್ರರ ನಡುವೆ ಎನ್ಕೌಂಟರ್ನಲ್ಲಿ ಇಬ್ಬರು ಅಪರಿಚಿತ ಭಯೋತ್ಪಾದಕರು ಹತರಾಗಿದ್ದಾರೆ ಎಂದು ಕಾಶ್ಮೀರ ಪೊಲೀಸರು ಮಾಹಿತಿ ನೀಡಿದ್ದಾರೆ
ಈ ಕುರಿತು ಟ್ವೀಟ್ ಮಾಡಿರುವ ಕಾಶ್ಮೀರ ಪೊಲೀಸರು, ಶೋಪಿಯಾನ್‌ನ ಚೌಗಾಮ್ ಪ್ರದೇಶದಲ್ಲಿ ಭಯೋತ್ಪಾದಕರು ಮತ್ತು ಸೇನೆ ನಡುವೆ ಗುಂಡಿನ ಚಕಮಕಿ ನಡೆಯುತ್ತಿದ್ದು, ಕಳೆದ 24 ಗಂಟೆಗಳಲ್ಲಿ ದಕ್ಷಿಣ ಕಾಶ್ಮೀರದಲ್ಲಿ ನಡೆದ ಎರಡನೇ ಶೋಧ ಕಾರ್ಯಾಚರಣೆ ಇದಾಗಿದೆ ಎಂದು ತಿಳಿಸಿದ್ದಾರೆ.
ಶುಕ್ರವಾರ ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿರುವ ಅರ್ವಾನಿ ಪ್ರದೇಶದ ಮುಮನ್ಹಾಲ್ನಲ್ಲಿ ಭಯೋತ್ಪಾದಕರು ಮತ್ತು ಭದ್ರತಾ ಪಡೆಗಳ ನಡುವೆ ಗುಂಡಿನ ಚಕಮಕಿ ನಡೆದಿತ್ತು. ಈ ವೇಳೆ ಓರ್ವ ಉಗ್ರನನ್ನು ಹೊಡೆದುರುಳಿಸಲಾಗಿತ್ತು.
ಹತನಾದ ಉಗ್ರನನ್ನು ಕುಲ್ಗಾಮ್‌ನ ಸೆಹ್ಪೋರಾ ನಿವಾಸಿ ಶಹಜಾದ್ ಅಹ್ಮದ್ ಸೆಹ್ ಎಂದು ಗುರುತಿಸಲಾಗಿದೆ. ಈತ ಕಳೆದ ವರ್ಷದ ಸೆಪ್ಟೆಂಬರ್‌ನಿಂದ ಭಯೋತ್ಪಾದಕ ಚಟುವಟಿಕೆಯಲ್ಲಿ ಸಕ್ರಿಯನಾಗಿದ್ದ ಎಂದು ತಿಳಿದುಬಂದಿದೆ.
ಕಾರ್ಯಾಚರಣೆ ವೇಳೆ ಶಹಜಾದ್ ಬಳಿಯಿದ್ದ ಎಕೆ-47 ರೈಫಲ್, ಎರಡು ಮ್ಯಾಗಜೀನ್‌ಗಳು, 40 ಎಕೆ ರೌಂಡ್‌ಗಳು ಮತ್ತು ಗ್ರೆನೇಡ್ ಸೇರಿದಂತೆ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.