ತಿರುವನಂತಪುರಂ: ಗಗನಯಾನ ಪ್ರಾಯೋಗಿಕ ಪರೀಕ್ಷೆ, ಮಾನವಸಹಿತ ಗಗನಯಾನ, ಸೂರ್ಯನ ಅಧ್ಯಯನಕ್ಕೆ ಆದಿತ್ಯ-ಎಲ್1 ಯೋಜನೆ.. ಹೀಗೆ ಸಾಲು ಸಾಲು ಬಾಹ್ಯಾಕಾಶ ಸಂಶೋಧನೆಗಳಲ್ಲಿ ತೊಡಗಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ಅಧ್ಯಕ್ಷ ಡಾ.ಸೋಮನಾಥ್ ಅವರು ಶೀಘ್ರದಲ್ಲೇ ತಮ್ಮ ಆತ್ಮಚರಿತ್ರೆಯ ಪುಸ್ತಕವನ್ನು ಹೊರತರಲಿದ್ದಾರೆ.
'ನಿಲಾವು ಕುಡಿಚ್ಚ ಸಿಂಹಂಗಳ್' ಹೆಸರಿನ ಆತ್ಮಕಥನ ಮಲಯಾಳಂ ಭಾಷೆಯಲ್ಲಿ ಬರಲಿದೆ. ಇದರಲ್ಲಿ ಅವರು ಕಾಲೇಜು ಅಧ್ಯಯನ ವೇಳೆ ಹಾಸ್ಟೆಲ್ ವೆಚ್ಚ ಕಡಿತಗೊಳಿಸಲು ಸಾಧಾರಣ ಕೊಠಡಿಯಲ್ಲಿ ವಾಸ, ಸಾರಿಗೆ ವೆಚ್ಚ ಉಳಿಸಲು ಹಳೆಯ ಸೈಕಲ್ ಬಳಕೆ ವಿಚಾರಗಳನ್ನು ನಮೂದಿಸಿದ್ದಾರೆ. ಇದೊಂದು ಪ್ರೇರಣದಾಯಕ ಕಥೆಯಾಗಿದೆ. ಕಷ್ಟಕಾಲದಲ್ಲಿ ಕಠಿಣ ಪರಿಶ್ರಮದ ಶಕ್ತಿಯನ್ನು ಪುಸ್ತಕ ಕೇಂದ್ರೀಕರಿಸಿದೆ ಎಂದು ಅವರು ಉಲ್ಲೇಖಿಸಿದ್ದಾರೆ.
ಸಾಲು ಸಾಲು ಯೋಜನೆಗಳು: ಚಂದ್ರಯಾನದ ಯಶಸ್ಸಿನ ನಂತರ ಸೂರ್ಯನ ಅಧ್ಯಯನಕ್ಕಾಗಿ ಹಾರಿಬಿಡಲಾಗಿರುವ ಆದಿತ್ಯ-ಎಲ್1, ಮಾನವಸಹಿತ ಗಗನಯಾನಕ್ಕಾಗಿ ಪ್ರಾಯೋಗಿಕ ಪರೀಕ್ಷೆಗಳಲ್ಲಿ ಸೋಮನಾಥ್ ಅವರು ಬ್ಯುಸಿಯಾಗಿದ್ದರೂ, ತಮ್ಮ ಜೀವನಗಾಥೆಯನ್ನು ವಿವರಿಸಲು ಸಮಯವನ್ನು ಮೀಸಲಿಟ್ಟುಕೊಂಡಿದ್ದಾರೆ.
ಕೇರಳ ಮೂಲದ ಲಿಪಿ ಪಬ್ಲಿಕೇಷನ್ಸ್‌ನಿಂದ ಪ್ರಕಟವಾಗುತ್ತಿರುವ ಈ ಪುಸ್ತಕವು ನವೆಂಬರ್‌ನಲ್ಲಿ ಹೊರಬರಲಿದೆ. ಇದು ಒಬ್ಬ ಹಳ್ಳಿಯ ಬಡ ಯುವಕನ ಸಾಹಸಗಾಥೆಯಾಗಿದೆ. ಭಾರತದಂತಹ ದೇಶದಲ್ಲಿ ಸಿಗುವ ಅವಕಾಶಗಳನ್ನು ಬಳಸಿಕೊಂಡು ಬೆಳೆಯುವ ಬಗೆಯನ್ನು ಇದು ವಿವರಿಸಿದೆ. ಇಸ್ರೋದಲ್ಲಿ ಆರಂಭಿಕ, ಉನ್ನತ ಹುದ್ದೆಗಳಿಗೆ ಪದೋನ್ನತಿ, ಚಂದ್ರಯಾನ-3 ಉಡಾವಣೆಯವರೆಗಿನ ಪ್ರಯಾಣದ ಪ್ರಸಂಗಗಳಿದ್ದರೂ, ಇದೊಂದು ಸ್ಫೂರ್ತಿದಾಯಕ ಕಥೆ ಎಂದು ಸೋಮನಾಥ್ ಹೇಳಿದ್ದಾರೆ.
ಕಷ್ಟಗಳ ಮಧ್ಯೆ ಕನಸು ಬೆನ್ನಟ್ಟಿ: ಇಂಜಿನಿಯರಿಂಗ್ ಅಥವಾ ಬಿಎಸ್ಸಿಗೆ ಸೇರಬೇಕೇ ಎಂದು ಗೊಂದಲದಲ್ಲಿದ್ದ ಸಾಮಾನ್ಯ ಹಳ್ಳಿಯ ಯುವಕ, ತನ್ನ ಕಷ್ಟದ ಜೀವನದಲ್ಲಿ ತೆಗೆದುಕೊಂಡ ಸರಿಯಾದ ನಿರ್ಧಾರಗಳು ಮತ್ತು ಭಾರತದಂತಹ ದೇಶದಲ್ಲಿ ಆತ ಪಡೆದ ಅವಕಾಶಗಳಿಂದಾಗಿ ಬೆಳೆದು ಬಂದ ಬಗೆ ಇದರಲ್ಲಿದೆ. ಈ ಪುಸ್ತಕವು ನನ್ನ ಜೀವನದ ಕಥೆಯನ್ನು ಹೇಳುವ ಬದಲಿಗೆ, ಜೀವನದಲ್ಲಿ ಪ್ರತಿಕೂಲತೆಗಳ ಮಧ್ಯೆಯೂ ಕನಸುಗಳನ್ನು ಬೆನ್ನಟ್ಟಲು ಪ್ರೇರೇಪಿಸುವ ಉದ್ದೇಶ ಹೊಂದಿದೆ ಎಂದು ಇಸ್ರೋ ಅಧ್ಯಕ್ಷರು ಹೇಳಿದರು.
ಚಂದ್ರಯಾನ-3 ರ ಐತಿಹಾಸಿಕ ಯಶಸ್ಸು ಪುಸ್ತಕವನ್ನು ಶೀಘ್ರವೇ ಹೊರತರುವಂತೆ ಮಾಡಿದೆ. ಚಂದ್ರಯಾನವು ಸಮಾಜದಲ್ಲಿ ತುಂಬಾ ಪ್ರಭಾವ ಬೀರಿದೆ. ಅದರ ಯಶಸ್ಸಿನಿಂದ ಎಷ್ಟು ಜನರು, ವಿಶೇಷವಾಗಿ ಮಕ್ಕಳು ಸ್ಫೂರ್ತಿ ಪಡೆದಿದ್ದಾರೆಂದು ನಾವು ನೋಡಬಹುದು. ಭಾರತ ಮತ್ತು ಭಾರತೀಯರು ಎಂಥದ್ದೇ ಮಹತ್ತರವಾದ ಕೆಲಸಗಳನ್ನು ಮಾಡಬಹುದು ಎಂಬುದು ಈ ಮೂಲಕ ಸಾಬೀತಾಗಿದೆ ಎಂದರು.
ಇದನ್ನೂ ಓದಿ: ಅಕ್ಟೋಬರ್ 29ರಂದು ಭಾಗಶಃ ಚಂದ್ರಗ್ರಹಣ; ಇಲ್ಲಿದೆ ಸಂಪೂರ್ಣ ಮಾಹಿತಿ