ಜಾರ್ಖಂಡ್: ಪ್ರತಿಯೊಬ್ಬರಿಗೂ ದೊಡ್ಡ-ದೊಡ್ಡ ಕನಸುಗಳಿರುತ್ತವೆ. ಕನಸಿನ ಹಾದಿಯಲ್ಲಿ ಸಾಗುತ್ತಾ ಮುಂದೆಹೋದ್ರೆ ಕೆಲವೊಮ್ಮೆ ಆರ್ಥಿಕ ಪರಿಸ್ಥಿತಿ ಅಡ್ಡಿಯಾಗುತ್ತದೆ. ಈ ಎಲ್ಲ ಸಮಸ್ಯೆಗಳನ್ನು ಮೆಟ್ಟಿನಿಂತು ಇಲ್ಲೋರ್ವ ಮಹಿಳೆ ಎಲ್ಲರಿಗೂ ಮಾದರಿಯಾಗಿದ್ದಾರೆ.
ಜಾರ್ಖಂಡ್ನ ಹಜಾರಿಬಾಗ್ ಮೂಲದ ನಂದಿನಿ ಚಕ್ರವರ್ತಿ ಎಂಬುವರು ಕಾಲೇಜ್ಗೆ ಟಾಪರ್ ಆಗಿ, ಇದೀಗ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುವ ಜೊತೆಗೆ ಬಸ್ ಚಾಲಕಿಯಾಗಿ ಸಹ ಕೆಲಸ ಮಾಡುತ್ತಿದ್ದಾರೆ.
ಸಂಸ್ಕೃತದಲ್ಲಿ ಎಂಎ ಪದವಿ ಪಡೆದಿರುವ ಚಕ್ರವರ್ತಿ 1998ರಲ್ಲಿ ಖಾಸಗಿ ಶಾಲೆಯಲ್ಲಿ ಶಿಕ್ಷಕರಾಗಿ ಸೇರಿದ್ದರು. ಈ ಸಂಬಳದಿಂದ ಕುಟುಂಬ ನಿರ್ವಾಹಣೆ ಹಾಗೂ ತನ್ನ ಇಬ್ಬರು ಮಕ್ಕಳಿಗೆ ಸರಿಯಾದ ಶಿಕ್ಷಣ ನೀಡುವುದು ಕಷ್ಟ ಎಂದು ಅರಿತು, ಪರ್ಯಾಯ ಮಾರ್ಗವನ್ನು ಹೊಡುಕಿಕೊಂಡು 2004 ರಿಂದ ಶಾಲಾ ಬಸ್ ಚಾಲನೆ ಮಾಡುತ್ತಿದ್ದಾರೆ. ಬಸ್ ಚಾಲನೆ ಮಾಡುವುದರ ಜೊತೆಗೆ ಬಡ ಮತ್ತು ವಂಚಿತ ಮಕ್ಕಳಿಗೆ ಉಚಿತವಾಗಿ ಪಾಠ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೆ ಶಾಲಾ ಉಡುಪುಗಳು ಮತ್ತು ಶಿಕ್ಷಣಕ್ಕೆ ಅಗತ್ಯವಾದ ಮೂಲ ಸಾಧನಗಳನ್ನು ಒದಗಿಸಿ, ಮಾದರಿ ಶಿಕ್ಷಕಿಯಾಗಿದ್ದಾರೆ.
ಈ ಕುರಿತು ಈಟಿವಿ ಭಾರತದೊಂದಿಗೆ ತಮ್ಮ ಅಭಿಪ್ರಾಯ ಹಂಚಿಕೊಂಡ ನಂದಿನಿ, ನಾನು ವಿನೋಬಾ ಭಾವೆ ವಿಶ್ವವಿದ್ಯಾಲಯದಲ್ಲಿ ಸಂಸ್ಕೃತದಲ್ಲಿ ಸ್ನಾತಕೋತ್ತರ ಪದವಿ ಪಡೆದುಕೊಂಡಿದ್ದೇನೆ. ಶಿಕ್ಷಕಿಯಾಗಿ ಖಾಸಗಿ ಶಾಲೆ ಸೇರಿಕೊಂಡೆ. ರೇಡಿಯೋ ಕೇಂದ್ರದಲ್ಲಿ ಅನೌನ್ಸರ್ ಆಗಿ ನನ್ನ ಪತಿ ಕೆಲಸ ಮಾಡುತ್ತಿದ್ದಾರೆ. ನಾನು ಶಾಲಾ ಬಸ್ ಓಡಿಸುವುದಕ್ಕೆ ನನ್ನ ಗಂಡ ಹೆಚ್ಚು ಪ್ರೋತ್ಸಾಹ ನೀಡಿದರು. ನನ್ನ ಆಭರಣಗಳನ್ನು ಮಾರಿ 2004 ರಲ್ಲಿ ವ್ಯಾನ್ ಖರೀದಿಸಿ, ಅಂದಿನಿಂದ ಶಾಲಾ ಬಸ್ ಓಡಿಸುತ್ತಿದ್ದೇನೆ ಎಂದು ಹೇಳಿದರು.