ಡೆಹ್ರಾಡೂನ್: ದೇಶಕ್ಕಾಗಿ ಚಿನ್ನದ ಪದಕ ಗೆಲ್ಲುವ ಕ್ರೀಡಾಪಟುಗಳಿಗೆ ಕೇಂದ್ರ ಹಾಗೂ ಆಯಾ ರಾಜ್ಯ ಸರ್ಕಾರ ಬಹುಮಾನದ ರೀತಿಯಲ್ಲಿ ಹಣ, ಸರ್ಕಾರಿ ನೌಕರಿ ಹಾಗೂ ಮನೆ ನೀಡುವುದು ಸರ್ವೆ ಸಾಮಾನ್ಯ. ಆದರೆ ಇಲ್ಲೋರ್ವ ಮಹಿಳಾ ಕ್ರೀಡಾಪಟು ದೇಶಕ್ಕಾಗಿ 24 ಚಿನ್ನದ ಪದಕ ಗೆದ್ದಿದ್ದರೂ, ಸದ್ಯ ಬೀದಿ ಬದಿ ವ್ಯಾಪಾರ ಮಾಡುವಂತಹ ಪರಿಸ್ಥಿತಿ ನಿರ್ಮಾಣಗೊಂಡಿದೆ.
ಉತ್ತರಾಖಂಡದ ಮೊದಲ ಅಂತಾರಾಷ್ಟ್ರೀಯ ಪ್ಯಾರಾಶೂಟರ್ ದಿಲ್ರಾಜ್ ಕೌರ್ ಜೀವನ ನಿರ್ವಹಣೆಗೋಸ್ಕರ ಬೀದಿ ಬದಿ ಅಂಗಡಿಯನ್ನಿಟ್ಟುಕೊಂಡು ವ್ಯಾಪಾರ ನಡೆಸುತ್ತಿದ್ದಾರೆ. ಅಂಗಡಿಯಲ್ಲಿ ಬಿಸ್ಕತ್ ಹಾಗೂ ಚಿಪ್ಸ್ ಮಾರಾಟ ಮಾಡುತ್ತಿದ್ದಾರೆ. 2005 ರಿಂದ 15 ವರ್ಷಗಳ ಕಾಲ ಭಾರತ ಪ್ರತಿನಿಧಿಸಿರುವ ಅವರು, ಅನೇಕ ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಭಾಗಿಯಾಗಿ ಚಿನ್ನದ ಪದಕ ಗೆದ್ದಿದ್ದಾರೆ. ಆದರೆ ಇದೀಗ ಅವರಿಗೆ ಯಾವುದೇ ರೀತಿಯ ಆರ್ಥಿಕ ಸಹಾಯ ಸಿಗದ ಕಾರಣ ಹೊಟ್ಟೆ ಪಾಡಿಗೋಸ್ಕರ ಈ ಕೆಲಸ ಮಾಡುತ್ತಿದ್ದಾರೆ.
ಇದನ್ನೂ ಓದಿರಿ: ಲವ್ ಮ್ಯಾರೇಜ್ ಮಾಡಿಕೊಂಡಿದ್ದ ಜೋಡಿ ಮೇಲೆ ಗುಂಡಿನ ದಾಳಿ... CCTVಯಲ್ಲಿ ದೃಶ್ಯ ಸೆರೆ
ದೇಶಕ್ಕಾಗಿ 24 ಚಿನ್ನ, 8 ಬೆಳ್ಳಿ ಹಾಗೂ 3 ಕಂಚಿನ ಪದಕ ಗೆದ್ದಿದ್ದಾರೆ. ಸದ್ಯ ಆರ್ಥಿಕ ತೊಂದರೆಯಿಂದಾಗಿ ಡೆಹ್ರಾಡೂನ್ನಲ್ಲಿರುವ ಗಾಂಧಿ ಪಾರ್ಕ್ನಲ್ಲಿ ಚಿಪ್ಸ್ ಹಾಗೂ ಬಿಸ್ಕತ್ ಮಾರಾಟ ಮಾಡುತ್ತಿದ್ದು, ಅವರಿಗೆ ತಾಯಿ ಸಹ ಸಾಥ್ ನೀಡಿದ್ದಾರೆ. ತಮ್ಮ ಸಮಸ್ಯೆ ಬಗ್ಗೆ ರಾಜ್ಯ ಸರ್ಕಾರಕ್ಕೆ ಅನೇಕ ಸಲ ಮನವಿ ಮಾಡಿದ್ರೂ ಕೂಡ ಸಹಾಯ ಮಾಡಿಲ್ಲ ಎಂದು ಅವರು ಹೇಳಿಕೊಂಡಿದ್ದಾರೆ.