ಕಡಪ (ವೈಎಸ್‌ಆರ್): ಸಾಲ ತೀರಿಸದ ಕಾರಣ ವ್ಯಕ್ತಿಯೊಬ್ಬ ಸಾಲಗಾರನ ಹೆಂಡತಿಯನ್ನು ಬಲವಂತದಿಂದ ಕರೆದೊಯ್ದ ಅಮಾನವೀಯ ಘಟನೆಯು ವೈಎಸ್‌ಆರ್ ಕಡಪ ಜಿಲ್ಲೆಯ ಮೈದುಕೂರು ಮಂಡಲದ ಜೀವಿ ಸತ್ರಂನಲ್ಲಿ ನಡೆದಿದೆ. ಕೃತ್ಯ ಎಸಗಿದ ನರ್ಸರಿ ಮಾಲೀಕ ಸುಧಾಕರ್ ರೆಡ್ಡಿ ಎಂಬುವನನ್ನು ಪೊಲೀಸರು ಇದೀಗ ಬಂಧಿಸಿದ್ದಾರೆ.
ದೂರಿನ ಮೇರೆಗೆ ಪೊಲೀಸರು ಸ್ಥಳಕ್ಕೆ ತೆರಳಿ ಆ ಮಹಿಳೆಯನ್ನು ಇದೀಗ ಆಕೆಯ ಕುಟುಂಬಸ್ಥರಿಗೆ ಒಪ್ಪಿಸಿದ್ದಾರೆ. ಇಲ್ಲಿಯ ಎಸ್ಟಿ ಕಾಲೋನಿಯ ಸುಬ್ಬರಾಯುಡು ಎಂಬ ವ್ಯಕ್ತಿ ಜೀವಿ ಸತ್ರಂನಲ್ಲಿ ನರ್ಸರಿ ಮಾಡಿಕೊಂಡಿದ್ದ ಸುಧಾಕರ್ ರೆಡ್ಡಿ ಎಂಬುವರಿಂದ 2 ಲಕ್ಷ ರೂ. ಸಾಲ ಪಡೆದಿದ್ದ. ಆ ಸಾಲ ತೀರಿಸಲಾಗದೇ ಸುಬ್ಬರಾಯುಡು ಕಾರಣ ನೀಡಿ ಸತಾಯಿಸುತ್ತಿದ್ದನು. ಅಲ್ಲದೇ ಅವರೊಂದಿಗೆ ಕೆಲಸ ಮಾಡುವುದನ್ನು ಸಹ ಬಿಟ್ಟಿದ್ದನು. ಇದರಿಂದ ಕೋಪಗೊಂಡ ಸುಧಾಕರ್ ರೆಡ್ಡಿ ಕಾಲೋನಿ ತೆರಳಿದ್ದ.
ಆ ವೇಳೆ ಸುಬ್ಬರಾಯಡು ಮನೆಯಲ್ಲಿ ಇಲ್ಲದ ಕಾರಣ ಅವನ ಪತ್ನಿ ನಾಗಮಣಿಯನ್ನು ಸುಧಾಕರ್ ರೆಡ್ಡಿ ಬಲವಂತವಾಗಿ ಕರೆದುಕೊಂಡು ಹೋಗಿದ್ದ. 2 ಲಕ್ಷ ಸಾಲ ತೀರಿಸುವವರೆಗೂ ಮಹಿಳೆಯನ್ನು ಮನೆಗೆ ಕಳುಹಿಸುವುದಿಲ್ಲ ಎಂದು ಕುಟುಂಬಸ್ಥರಿಗೆ ಎಚ್ಚರಿಕೆ ಸಹ ನೀಡಿದ್ದ. ಹಣವಿಲ್ಲದೇ ಪರದಾಡುತ್ತಿರುವ ಸುಬ್ಬರಾಯಡು ಬೇರೆ ದಾರಿ ಕಾಣದೇ ಇಂದು ಮೈದುಕೂರು ಪೊಲೀಸರಿಗೆ ದೂರು ನೀಡಿದ್ದನು. ನೀಚ ಕೃತ್ಯ ಗೊತ್ತಾಗುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ತೆರಳಿ ನಾಗಮಣಿಯನ್ನು ಕರೆತಂದು ಕುಟುಂಬಸ್ಥರಿಗೆ ಒಪ್ಪಿಸಿದ್ದಾರೆ.
ಸಾಲ ತೀರಿಸದಿದ್ದರೆ ಕಂತಿನಲ್ಲಿ ವಸೂಲಿ ಮಾಡಬೇಕು. ಮಹಿಳೆಯನ್ನು ಈ ರೀತಿ ಬಲವಂತದಿಂದ ಕರೆದುಕೊಂಡು ಹೋಗುತ್ತಿರುವುದಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಘಟನೆ ಜಿಲ್ಲಾದ್ಯಂತ ಸಂಚಲನ ಸೃಷ್ಟಿಸಿದೆ.
ಇದನ್ನೂ ಓದಿ: ವಿದ್ಯುತ್ ತಂತಿ ಮೇಲೆ ಬುದ್ಧಿಮಾಂದ್ಯನ ಸ್ಟಂಟ್... ವ್ಯಕ್ತಿಯ ರಕ್ಷಣೆಗೆ ಪೊಲೀಸರು, ಸ್ಥಳೀಯರ ಹರಸಾಹಸ