ನವದೆಹಲಿ: ಮಹಾಮಾರಿ ಕೊರೊನಾ ವೈರಸ್ಗೆ ಈಗಾಗಲೇ ದೇಶಾದ್ಯಂತ ವ್ಯಾಕ್ಸಿನೇಷನ್ ನೀಡಲಾಗುತ್ತಿದ್ದು, ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಇಲ್ಲಿಯವರೆಗೆ 2.6 ಕೋಟಿಗೂ ಅಧಿಕ ಜನರಿಗೆ ಕೊರೊನಾ ಲಸಿಕೆ ಹಾಕಲಾಗಿದೆ.
ಇದೀಗ ಲಭ್ಯವಾಗಿರುವ ಮಾಹಿತಿ ಪ್ರಕಾರ ಗೂಗಲ್ ಶೀಘ್ರದಲ್ಲೇ ವ್ಯಾಕ್ಸಿನೇಷನ್ ಕೇಂದ್ರಗಳ ಮಾಹಿತಿ ಮ್ಯಾಪ್ ಮೂಲಕ ಹಂಚಿಕೊಳ್ಳಲಿದ್ದು, ಕೇಂದ್ರ ಆರೋಗ್ಯ ಸಚಿವಾಲಯ ಹಾಗೂ ಗೂಗಲ್ ಕಂಪನಿ ಇದಕ್ಕಾಗಿ ನಿಕಟವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ತಿಳಿಸಿದೆ. ಸೋಷಿಯಲ್ ಮೀಡಿಯಾದಲ್ಲಿ ಹರಡುತ್ತಿರುವ ತಪ್ಪು ಮಾಹಿತಿ ಪತ್ತೆಹಚ್ಚಲು ಮತ್ತು ಲಸಿಕೆಗಳ ಬಗ್ಗೆ ಸಂದೇಶ ಕಳುಹಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ.
ಇದನ್ನೂ ಓದಿ: ಪೊಲೀಸ್ ಚೌಕಿ ಮೇಲೆ ಭಯೋತ್ಪಾದಕರಿಂದ ಗ್ರೆನೇಡ್ ದಾಳಿ.. ರಸ್ತೆ ಬಳಿ ಸ್ಫೋಟ!
ಜನವರಿ 16ರಿಂದ ದೇಶಾದ್ಯಂತ ಕೋವಿಡ್ ಲಸಿಕೆ ನೀಡುವ ಕಾರ್ಯ ಪ್ರಾರಂಭಗೊಂಡಿದ್ದು, ಇಲ್ಲಿಯವರೆಗೆ 2.6 ಕೋಟಿ ಜನರಿಗೆ ವ್ಯಾಕ್ಸಿನ್ ನೀಡಲಾಗಿದೆ. ಆದರೆ, ಇದರ ಮಧ್ಯೆ ಜನರಿಗೆ ಕೆಲವೊಮ್ಮೆ ತಪ್ಪು ಸಂದೇಶ ರವಾನೆಯಾಗುತ್ತಿದೆ. ಹೀಗಾಗಿ ಗೂಗಲ್ ಸರ್ಚ್ ಮೂಲಕ ಸರಿಯಾದ ಸೆಂಟರ್ಗಳ ಮಾಹಿತಿ ನೀಡುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ.
ಪ್ರಮುಖವಾಗಿ ತಮಿಳು, ತೆಲುಗು, ಮಲಯಾಳಂ, ಕನ್ನಡ, ಮರಾಠಿ, ಗುಜರಾತಿ, ಬಂಗಾಳಿ ಮತ್ತು ಹಿಂದಿ ಭಾಷೆಗಳಲ್ಲಿ ಗೂಗಲ್ ಮ್ಯಾಪ್ನಲ್ಲಿ ನಾವು ಸರ್ಚ್ ಮಾಡಬಹುದಾಗಿದ್ದು, ಸಾಮಾನ್ಯರು ಕೇಳುವ ಪ್ರಶ್ನೆಗಳಿಗೆ ಇಲ್ಲಿ ಉತ್ತರ ಸಹ ಸಿಗಲಿದೆ. ಜತೆಗೆ ಲಸಿಕೆ ವಿವರ, ಪರಿಣಾಮಕಾರಿತ್ವ, ಸುರಕ್ಷತೆ, ವಿತರಣೆ ಕುರಿತು ಸಹ ಇಲ್ಲಿ ಮಾಹಿತಿ ಲಭ್ಯವಾಗಲಿದೆ.