ಭೋಪಾಲ್: ಮಧ್ಯಪ್ರದೇಶದಲ್ಲಿ ಹೆಚ್ಚುತ್ತಿರುವ ಕೊರೊನಾದ ಸೋಂಕಿನ ಹಿನ್ನೆಲೆ ಭೋಪಾಲ್, ಇಂದೋರ್ ಮತ್ತು ಜಬಲ್ಪುರದಲ್ಲಿ ಭಾನುವಾರ ಲಾಕ್ ಡೌನ್ ವಿಧಿಸಲು ಸರ್ಕಾರ ನಿರ್ಧರಿಸಿದೆ.
ರಾಜ್ಯದಲ್ಲಿ ಶುಕ್ರವಾರ 1,140 ಹೊಸ ಕೊರೊನಾ ರೋಗಿಗಳು ಕಾಣಿಸಿಕೊಂಡ ನಂತರ ಭಾನುವಾರ ಲಾಕ್‌ಡೌನ್ ಮಾಡಲು ಸರ್ಕಾರ ನಿರ್ಧರಿಸಿದೆ. ಭೋಪಾಲ್‌ನಲ್ಲಿ 272 ಮತ್ತು ಇಂದೋರ್‌ನಲ್ಲಿ 300 ಹಾಗೂ ಜಬಲ್ಪುರದಲ್ಲಿ 97 ಕೋವಿಡ್ ಪ್ರಕರಣಗಳು ಕಂಡು ಬಂದಿವೆ.
ಕೊರೊನಾ ಹೆಚ್ಚುತ್ತಿರುವ ವೇಗವನ್ನು ನೋಡಿದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಪಶ್ಚಿಮ ಬಂಗಾಳ ಪ್ರವಾಸದಿಂದ ಹಿಂದಿರುಗಿ ನೇರವಾಗಿ ಸಚಿವಾಲಯಕ್ಕೆ ಭೇಟಿ ನೀಡಿದರು. ಬಳಿಕ ಕೊರೊನಾ ಸಂಬಂಧಿಸಿದಂತೆ ತುರ್ತು ಸಭೆ ಕರೆದರು. ಈ ಮೂರು ನಗರಗಳಲ್ಲಿ ಶನಿವಾರ ರಾತ್ರಿ 10 ರಿಂದ ಸೋಮವಾರ ಬೆಳಗ್ಗೆ 6 ರವರೆಗೆ ಲಾಕ್‌ಡೌನ್ ವಿಧಿಸಲಾಗುವುದು ಎಂದು ಸಭೆಯಲ್ಲಿ ನಿರ್ಧರಿಸಲಾಯಿತು. ಲಾಕ್ ಡೌನ್ ಸಮಯದಲ್ಲಿ ಅಗತ್ಯ ಸೇವೆಗಳು ಮತ್ತು ಕೈಗಾರಿಕೆಗಳು ಕಾರ್ಯನಿರ್ವಹಿಸುತ್ತಲೇ ಇರುತ್ತವೆ ಎಂದು ಸಭೆಯಲ್ಲಿ ತಿಳಿಸಲಾಯಿತು.
ಮಾರ್ಚ್ 31 ರವರೆಗೆ ಶಾಲಾ-ಕಾಲೇಜುಗಳು ಬಂದ್!
ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿವೆ. ಹೀಗಾಗಿ ಭೋಪಾಲ್, ಇಂದೋರ್ ಮತ್ತು ಜಬಲ್ಪುರ ನಗರಗಳಲ್ಲಿ ಲಾಕ್‌ಡೌನ್ ನಿರ್ಣಯ ಕೈಗೊತ್ತಿಕೊಂಡಿದ್ದೇವೆ. ಈ ಮೂರು ನಗರಗಳಲ್ಲಿ ಮಾರ್ಚ್ 31 ರವರೆಗೆ ಶಾಲೆಗಳು ಮತ್ತು ಕಾಲೇಜುಗಳು ಬಂದ್ ಮಾಡಲಾಗುವುದು. ಎಲ್ಲರೂ ಕೋವಿಡ್ ಮಾರ್ಗಸೂಚಿ ಪಾಲಿಸಿ ಎಂದು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಹೇಳಿದ್ದಾರೆ.