ನವದೆಹಲಿ: ಇದು ಹಬ್ಬದ ಸಂದರ್ಭವಾಗಿದ್ದು, ದೇಶದಲ್ಲಿ ಕೋವಿಡ್ ಕೇಸ್ಗಳು ಹೆಚ್ಚಾಗುವ ಸಾಧ್ಯತೆಯಿದೆ. ಹೀಗಾಗಿ ನಿರ್ಲಕ್ಷ್ಯ ವಹಿಸದೇ ಸುರಕ್ಷತೆಗೆ ಪ್ರಾಮುಖ್ಯತೆ ನೀಡಿ. ಆರು ಅಡಿ ದೈಹಿಕ ಅಂತರ ಕಾಯ್ದುಕೊಳ್ಳುವುದು, ಆಗಾಗಾ ಸಾಬೂನಿನಿಂದ ಕೈತೊಳೆಯುತ್ತಿರುವುದು ಹಾಗೂ ಮಾಸ್ಕ್ ಧರಿಸುವುದನ್ನು ಮರೆಯದಿರಿ ಎಂದು ಆರೋಗ್ಯ ಇಲಾಖೆ ನಿತ್ಯ ಎಚ್ಚರಿಕೆ ನೀಡುತ್ತಲೇ ಇದೆ.
ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 45,903 ಸೋಂಕಿತರು (ಭಾನುವಾರಕ್ಕಿಂತ 229 ಹೆಚ್ಚು ಕೇಸ್ಗಳು) ಪತ್ತೆಯಾಗಿದ್ದು, 490 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಈ ಮೂಲಕ ದೇಶದಲ್ಲಿ ಸೋಂಕಿತರ ಸಂಖ್ಯೆ 85,53,657 ಹಾಗೂ ಮೃತರ ಸಂಖ್ಯೆ 1,26,611ಕ್ಕೆ ಏರಿಕೆಯಾಗಿದೆ.
ಒಟ್ಟು ಸೋಂಕಿತರ ಪೈಕಿ ಶೇ.92.56 ರಷ್ಟು (79,17,373) ಮಂದಿ ಗುಣಮುಖರಾಗಿ, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಉಳಿದಂತೆ 5,09,673 ಕೇಸ್ಗಳು ಮಾತ್ರ ಸಕ್ರಿಯವಾಗಿವೆ ಎಂದು ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
ನವೆಂಬರ್ 8ರ ವರೆಗೆ 11,85,72,192 ಜನರಿಗೆ ಕೋವಿಡ್ ಟೆಸ್ಟ್ ಮಾಡಲಾಗಿದ್ದು, ನಿನ್ನೆ ಒಂದೇ ದಿನ 8,35,401 ಸ್ಯಾಂಪಲ್ಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ತಿಳಿಸಿದೆ.