ನವದೆಹಲಿ: ದೇಶವನ್ನೇ ಬೆಚ್ಚಿಬೀಳಿಸಿದ್ದ 2012 ರಲ್ಲಿ ನಡೆದ ದೆಹಲಿ ನಿರ್ಭಯಾ ಅತ್ಯಾಚಾರ ಪ್ರಕರಣ ಅವರನ್ನು ದಂಗುಬಡಿಸಿತ್ತು. ಮಹಿಳೆಯರಿಗೆ ರಕ್ಷಣೆಯೇ ಇಲ್ಲವಾಗಿದೆ ಎಂದು ಅವರ ಜೀವ ತಳಮಳಗೊಂಡಿತ್ತು. ಇದಕ್ಕೊಂದು ಪರಿಹಾರ ಕಂಡುಕೊಳ್ಳಲೇಬೇಕು ಎಂದು ಯೋಚಿಸಿ ಅನುಷ್ಠಾನಗೊಳಿಸಿದ್ದೇ ರೆಡ್ ಡಾಟ್ ಫೌಂಡೇಷನ್.
ರೆಡ್ ಡಾಟ್ ಸಂಸ್ಥೆ ಪೊಲೀಸರ ಜೊತೆಗೂಡಿ ಮಹಿಳೆಯರ ಸುರಕ್ಷತೆಗಾಗಿ ಕೆಲಸ ಮಾಡುತ್ತಿದೆ. ತನ್ನದೇ ಆ್ಯಪ್ ಒಂದನ್ನು ರೂಪಿಸಿ ಅದನ್ನು ಬಳಸುವ ಮಹಿಳೆಯರನ್ನು ಟ್ರ್ಯಾಕ್ ಮಾಡಿ ಅನಾಹುತ ಎದುರಿಸಲು ಮತ್ತು ಅವರ ರಕ್ಷಣೆಗೆ ಕಠಿಬದ್ಧವಾಗಿದೆ. ಇಂತಹ ಸಾಮಾಜಿಕ ಕಾಳಜಿಯ ಸಂಸ್ಥೆ ಜಾರಿ ಮಾಡಿದವರು ಮುಂಬೈ ಮೂಲದ ಎಲ್ಸಾ ಮೇರಿ ಡಿಸಿಲ್ವಾ.
ಹೌದು, ಮುಂಬೈ ಮೂಲದ ಮೇರಿ ಡಿಸಿಲ್ವಾ ಅವರು ಮಹಿಳಾ ಸುರಕ್ಷತೆಗಾಗಿ ಇನ್ನಿಲ್ಲದ ಯತ್ನ ನಡೆಸುತ್ತಿದ್ದಾರೆ. ಇವರ ಕಾರ್ಯಕ್ಕೆ ವಿಶ್ವಸಂಸ್ಥೆಯಲ್ಲೂ ಮೆಚ್ಚುಗೆ ವ್ಯಕ್ತವಾಗಿದೆ. ಹಲವಾರು ಅಂತಾರಾಷ್ಟ್ರೀಯ ಪ್ರಶಸ್ತಿಗಳು ಇವರನ್ನು ಅರಸಿ ಬಂದಿವೆ.
ಯಾರಿ ಎಲ್ಸಾ ಮೇರಿ: ಎಲ್ಸಾ ಮೇರಿ ಡಿಸಿಲ್ವಾ ಅವರು ವಿಮಾನಯಾನ ಸಂಸ್ಥೆಗಳಲ್ಲಿ 20 ವರ್ಷಗಳ ಅನುಭವ ಹೊಂದಿದ್ದಾರೆ. ನೆಟ್‌ವರ್ಕ್ ಪ್ಲಾನಿಂಗ್‌ನ ಉಪಾಧ್ಯಕ್ಷೆಯಾಗಿಯೂ ಕೆಲಸ ಮಾಡಿದ್ದಾರೆ. 2012 ರಲ್ಲಿ ದೆಹಲಿಯಲ್ಲಿ ನಡೆದ ನಿರ್ಭಯಾ ಅತ್ಯಾಚಾರ ಇವರನ್ನು ಬೆಚ್ಚಿ ಬೀಳಿಸಿತ್ತು. ಇಂಥದ್ದೇ ಹಲವು ಘಟನೆಗಳು ಮೇರಿ ಅವರನ್ನು ಚಿಂತೆಗೀಡು ಮಾಡಿತ್ತು. ಇವೆಲ್ಲಕ್ಕೂ ಪರಿಹಾರ ಕಂಡುಕೊಳ್ಳಲು ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿ 'ರೆಡ್ ಡಾಟ್ ಫೌಂಡೇಶನ್' ಪ್ರಾರಂಭಿಸಿದರು.
ಸಂಸ್ಥೆಯ ಮೂಲಕ ಮುಂಬೈನ ಸ್ಲಮ್‌ಗಳಿಂದ ಹಿಡಿದು ಶಾಲೆಗಳು, ಕಾಲೇಜುಗಳು, ಕಾರ್ಪೊರೇಟ್ ಕಚೇರಿಗಳಲ್ಲಿ ಲೈಂಗಿಕ ಕಿರುಕುಳ ಮತ್ತು ಅದನ್ನು ಹೇಗೆ ಎದುರಿಸಬೇಕು ಎಂಬುದರ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಂಡರು. ಇದಲ್ಲದೇ ಆನ್ಲೈನ್ ಮೂಲಕವೂ ಜಾಗೃತಿ ಮೂಡಿಸಿದರು.
ಅಪಾಯಕಾರಿ ಸ್ಥಳಗಳಲ್ಲಿ ಸಿಸಿಟಿವಿ ಅಳವಡಿಕೆ: ಕೆಲ ಅಪಾಯಕಾರಿ ಸ್ಥಳಗಳಲ್ಲಿ ಸಿಸಿಟಿವಿಗಳನ್ನು ಅಳವಡಿಸಿ ಜನರ ಮೇಲೆ ನಿಗಾ ವಹಿಸಿದರು. ಹಲವೆಡೆ ಪೊಲೀಸರು ನಿಯೋಜನೆ ಆಗುವಂತೆ ನೋಡಿಕೊಂಡರು. ಇದು ನಗರವಲ್ಲದೇ ಗ್ರಾಮೀಣ ಭಾಗಕ್ಕೂ ವಿಸ್ತರಿಸಿ ದೇಶಾದ್ಯಂತ ಸಂಸ್ಥೆ ವಿಸ್ತರಿಸಿತು.
ವಿದೇಶದಲ್ಲೂ ಜಾಗೃತಿ ಕಾರ್ಯಕ್ರಮ: 2017 ರಲ್ಲಿ ರೆಡ್ ಡಾಟ್ ಫೌಂಡೇಶನ್ ವಿದೇಶಕ್ಕೂ ವಿಸ್ತರಿಸಿ ಅಮೆರಿಕದಲ್ಲಿ ಮೊದಲ ಬಾರಿಗೆ ಸಂಸ್ಥೆಯ ಕಚೇರಿ ಆರಂಭಿಸಲಾಯಿತು. ಮಲೇಷ್ಯಾ, ಅರ್ಜೆಂಟೀನಾ, ದಕ್ಷಿಣ ಆಫ್ರಿಕಾ, ನೈಜೀರಿಯಾ, ಕ್ಯಾಮರೂನ್ ಮತ್ತು ನೇಪಾಳದಲ್ಲಿಯೂ ಸಂಸ್ಥೆಯ ಕಾರ್ಯಚಟುವಟಿಕೆಗಳು ಆರಂಭಿಸಿದವು. ಸಂಸ್ಥೆ ರೂಪಿಸಿದ ಆ್ಯಪ್ ಅನ್ನು ಬಳಸುವ ಮಹಿಳೆಯರ ಮೇಲೆ ನಿಗಾ ವಹಿಸಿ ತೊಂದರೆ ಕಂಡುಬಂದಲ್ಲಿ ಪೊಲೀಸರಿಗೆ ಮಾಹಿತಿ ನೀಡಿ ರಕ್ಷಣೆಗೆ ನೆರವು ನೀಡುತ್ತಿದೆ.
ಪ್ರಶಸ್ತಿಗಳ ಗೌರವ: ಎಲ್ಸಾ ಮೇರಿ ಡಿಸಿಲ್ವಾ ಅವರ ಸೇವೆ ಗುರುತಿಸಿ ಅನೇಕ ಅಂತಾರಾಷ್ಟ್ರೀಯ ಪ್ರಶಸ್ತಿಗಳು ಬಂದಿವೆ. ಹಿಲರಿ ಕ್ಲಿಂಟನ್ ಅವರ ಜೊತೆಗೆ ಜಾಗತಿಕ ನಾಯಕತ್ವ ಪ್ರಶಸ್ತಿ, ನೀತಿ ಆಯೋಗ, ಆಕ್ಸ್‌ಫರ್ಡ್ ಮತ್ತು ಸ್ಟ್ಯಾನ್‌ಫೋರ್ಡ್ ಪ್ರಶಸ್ತಿ, ಭಾರತ ಸರ್ಕಾರದಿಂದ ಸ್ತ್ರೀ ಶಕ್ತಿ, ವಿಶ್ವಸಂಸ್ಥೆಯ ಟ್ರಸ್ಟ್ ಲಾ ಇಂಪ್ಯಾಕ್ಟ್ ಸೇರಿದಂತೆ ಹಲವಾರು ಪ್ರಶಸ್ತಿಗಳು ಅವರ ಕಾರ್ಯಕ್ಕೆ ಸಿಕ್ಕ ಪ್ರತಿಫಲವಾಗಿವೆ.
ಪ್ರಶಸ್ತಿಯ ಜೊತೆಗೆ ಬಂದ ಹಣವನ್ನು ಸಂಸ್ಥೆಯ ಕೆಲಸಗಳಿಗೆ ಬಳಕೆ ಮಾಡಿದ್ದಾರೆ. ಟಾಟಾ ಟ್ರಸ್ಟ್ ಸೇರಿದಂತೆ ಹಲವು ಸಂಸ್ಥೆಗಳು ದೇಣಿಗೆ ನೀಡಿವೆ. ವಿಶ್ವದ ಯುವಜನತೆಯನ್ನು ಒಟ್ಟುಗೂಡಿಸಿ ಲಿಂಗಾಧಾರಿತ ತಾರತಮ್ಯ ಮತ್ತು ಕಿರುಕುಳದ ವಿರುದ್ಧ ಧ್ವನಿ ಎತ್ತುವಲ್ಲಿ ಅವರ ಸೇವೆ ಶ್ಲಾಘನೀಯ.
ವಿಶ್ವಸಂಸ್ಥೆಯಲ್ಲಿ ಬಹುಪರಾಕ್: ವಿಶ್ವಸಂಸ್ಥೆಯಲ್ಲಿ ನಡೆದ ಸಮ್ಮೇಳನದಲ್ಲಿ ಪ್ರಧಾನ ಕಾರ್ಯದರ್ಶಿಯಾದ ಆಂಟೋನಿಯೊ ಗುಟೆರಸ್ ಅವರು ಎಲ್ಸಾ ಮೇರಿ ಡಿಸಿಲ್ವಾ ಅವರ ಕಾರ್ಯವನ್ನು ವಿಶ್ವವೇ ಗಮನಿಸುವಂತೆ ಹೊಗಳಿದ್ದರು. ಎಲ್ಸಾ ಮೇರಿ ಅವರಂತಹ ಜನರನ್ನು ಕಂಡಾಗ ನನಗೆ ತುಂಬಾ ಹೆಮ್ಮೆಯಾಗುತ್ತದೆ. ಇಂತಹ ಸಾಮಾಜಿಕ ಕಾಳಜಿ ಹೊತ್ತ ಮಹಿಳೆಯರು ಇನ್ನಷ್ಟು ಮುಂದೆ ಬರಬೇಕು ಎಂದು ಬಹುಪರಾಕ್ ನೀಡಿದ್ದರು.
ಓದಿ: ಡಿಜಿಟಲ್ ಮಾಧ್ಯಮ ಪತ್ರಕರ್ತರಿಗೂ ಮಾನ್ಯತೆ: ಸಚಿವ ಅನುರಾಗ್ ಠಾಕೂರ್