ಅಮೆರಿಕ: ಭಾರತದ ಕೋವಿಡ್ ಪರಿಸ್ಥಿತಿಯು ಭಾರಿ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಹಲವಾರು ರಾಜ್ಯಗಳಲ್ಲಿ ಆತಂಕಕಾರಿಯಾದ ಪ್ರಕರಣಗಳು, ಆಸ್ಪತ್ರೆಗಳಲ್ಲಿ ಸಾವು-ನೋವುಗಳನ್ನು ನೋಡುತ್ತಲೇ ಇವೆ ಎಂದು ಡಬ್ಲ್ಯೂಹೆಚ್‌ಒ ಮುಖ್ಯಸ್ಥ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಶುಕ್ರವಾರ ಹೇಳಿದ್ದಾರೆ.
ಭಾರತದಲ್ಲಿ ಕೋವಿಡ್ ಉಲ್ಬಣವಾಗುತ್ತಿರುವುದರ ಬಗ್ಗೆ ಮಾತನಾಡಿರುವ ಅವರು, ಸಾವಿರಾರು ಆಮ್ಲಜನಕ ಕಂಟೈನರ್ಗಳು, ಮೊಬೈಲ್ ಫೀಲ್ಡ್ ಆಸ್ಪತ್ರೆಗಳಿಗೆ ಡೇರೆಗಳು, ಮಾಸ್ಕ್ಗಳು ಸೇರಿದಂತೆ ಇತರ ವೈದ್ಯಕೀಯ ಸಾಮಗ್ರಿಗಳನ್ನು ವಿಶ್ವ ಆರೋಗ್ಯ ಸಂಸ್ಥೆಯಿಂದ ರವಾನಿಸಲಾಗಿದೆ ಎಂದರು.
ಭಾರತವು ಭಾರಿ ಪ್ರಮಾಣದಲ್ಲಿ ಕೋವಿಡ್ ಸಮಸ್ಯೆ ಎದುರಿಸುತ್ತಿದೆ. ಹಲವಾರು ರಾಜ್ಯಗಳಲ್ಲಿ ಆತಂಕಕಾರಿ ಸಂಖ್ಯೆಯ ಪ್ರಕರಣಗಳು, ಆಸ್ಪತ್ರೆಗಳ ಸಮಸ್ಯೆ ಮತ್ತು ಸಾವು-ನೋವುಗಳು ಸಂಭವಿಸುತ್ತಿವೆ. ಇಂತಹ ಸಮಯದಲ್ಲಿ ಭಾರತವನ್ನು ಬೆಂಬಲಿಸುತ್ತಿರುವ ಎಲ್ಲಾ ಮಧ್ಯಸ್ಥಗಾರರಿಗೆ ಧನ್ಯವಾದಗಳು ಎಂದು ದೈನಂದಿನ ಮಾಧ್ಯಮಗೋಷ್ಟಿಯಲ್ಲಿ ಡಬ್ಲ್ಯೂಹೆಚ್‌ಒ ಮಹಾನಿರ್ದೇಶಕರು ಹೇಳಿದರು.
ಕೊರೊನಾವೈರಸ್ ಸಾಂಕ್ರಾಮಿಕ ರೋಗದ ಭೀಕರ ಅಲೆಯು ಮಧ್ಯ ಭಾರತದಲ್ಲಿ ಹೆಚ್ಚಾಗಿದೆ. ಶುಕ್ರವಾರದಂದು 3,43,144 ಜನರಲ್ಲಿ ಕೊರೊನಾ ವೈರಸ್ ಸೋಂಕಿನ ಕೇಸ್ಗಳು ಪತ್ತೆಯಾಗಿವೆ. ಸಾವಿನ ಸಂಖ್ಯೆ 2,62,317ಕ್ಕೇರಿಕೆಯಾಗಿದೆ. ಭಾರತದ ಕೋವಿಡ್ ಸಂಖ್ಯೆ ಡಿಸೆಂಬರ್ 19 ರಂದು 10 ಮಿಲಿಯನ್ ಗಡಿ ದಾಟಿತ್ತು. ಈ ಕಳೆದ ನಾಲ್ಕೈದು ತಿಂಗಳಲ್ಲಿ ಇದು ದ್ವಿಗುಣಗೊಂಡಿರುವುದು ಬೆಳಕಿಗೆ ಬಂದಿದೆ.
ತುರ್ತು ಪರಿಸ್ಥಿತಿ ಭಾರತಕ್ಕೆ ಸೀಮಿತವಾಗಿಲ್ಲ. ನೇಪಾಳ, ಶ್ರೀಲಂಕಾ, ವಿಯೆಟ್ನಾಂ, ಕಾಂಬೋಡಿಯಾ, ಥೈಲ್ಯಾಂಡ್ ಮತ್ತು ಈಜಿಪ್ಟ್ ದೇಶಗಳು ಕೋವಿಡ್ ಪ್ರಕರಣಗಳ ಹೆಚ್ಚಳದಿಂದ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿವೆ. ಅಮೆರಿಕದ ಕೆಲವು ಕಡೆ ಇನ್ನೂ ಹೆಚ್ಚಿನ ಸಂಖ್ಯೆಯ ಪ್ರಕರಣಗಳಿವೆ. ಅಮೆರಿಕದ ಒಂದು ಪ್ರದೇಶದಲ್ಲಿ ಕಳೆದ ವಾರ ನಡೆದ ಕೊರೊನಾ ಸಾವುಗಳಲ್ಲಿ 40 ಪ್ರತಿಶತದಷ್ಟು ದಾಖಲಾಗಿವೆ ಎಂದು ಅವರು ವಿವರಿಸಿದರು.
ಕೊರೊನಾ ಸಂಕಷ್ಟಕ್ಕೆ ಸಿಲುಕಿದ ದೇಶಗಳಿಗೆ ಡಬ್ಲ್ಯೂಹೆಚ್‌ಒ ಸಾಧ್ಯವಿರುವ ಎಲ್ಲ ರೀತಿಯಲ್ಲಿಯೂ ಬೆಂಬಲವನ್ನು ನೀಡುತ್ತಲೇ ಇರುತ್ತದೆ. ಕೋವಿಡ್ನಿಂದ ಈಗಾಗಲೇ ವಿಶ್ವದಾದ್ಯಂತ 3.3 ದಶಲಕ್ಷಕ್ಕೂ ಹೆಚ್ಚು ಜೀವಗಳನ್ನು ನಾವು ಕಳೆದುಕೊಂಡಿದ್ದೇವೆ ಎಂದು ಘೆಬ್ರೆಯೆಸಸ್ ಮಾಹಿತಿ ನೀಡಿದರು.
ಲಸಿಕೆ ಪೂರೈಕೆ ಒಂದು ಪ್ರಮುಖ ಸವಾಲಾಗಿ ಉಳಿದಿದೆ. ಸಾರ್ವಜನಿಕ ಆರೋಗ್ಯ ಕ್ರಮಗಳು ಮತ್ತು ವ್ಯಾಕ್ಸಿನೇಷನ್ ಮೂಲಕ ಜೀವ ಉಳಿಸುವುದಕ್ಕೆ ಇನ್ನೊಂದು ಹಾದಿಯಿಲ್ಲ. ಕೋವಿಡ್ ನಿಯಮಗಳು ಮತ್ತು ಲಸಿಕೆ ಮಾತ್ರ ಸಾಂಕ್ರಾಮಿಕ ರೋಗದಿಂದ ಹೊರಬರುವ ಏಕೈಕ ಮಾರ್ಗವಾಗಿದೆ ಎಂದು ಅವರು ವಿಷಾದಿಸಿದರು.