ನವದೆಹಲಿ: ಮಕ್ಕಳ ಪರಿಷ್ಕೃತ ಟಿಕೆಟ್ ದರದಿಂದ ಭಾರತೀಯ ರೈಲ್ವೆ ಕಳೆದ ಏಳು ವರ್ಷದಲ್ಲಿ ಹೆಚ್ಚುವರಿಯಾಗಿ 2,800 ಕೋಟಿ ಆದಾಯ ಗಳಿಸಿದೆ ಎಂದು ಆರ್ಟಿಐ ಮಾಹಿತಿಯಿಂದ ತಿಳಿದು ಬಂದಿದೆ. ಈ ಸಂಬಂಧ ಸಲ್ಲಿಕೆಯಾಗಿದ್ದ ಆರ್ಟಿಐ ಅರ್ಜಿಗೆ ಪ್ರತಿಕ್ರಿಯಿಸಿರುವ ಕೇಂದ್ರ ರೈಲ್ವೇ ಮಾಹಿತಿ ವ್ಯವಸ್ಥೆ (ಸಿಆರ್ಐಎಸ್) 2022-23ರಲ್ಲೇ ಮಕ್ಕಳ ಪರಿಷ್ಕೃತ ದರ ಪ್ರಯಾಣದಿಂದ 560 ಕೋಟಿ ಗಳಿಸಲಾಗಿದ್ದು, ಏಳು ವರ್ಷದಲ್ಲೇ ಅಧಿಕ ಮೊತ್ತ ಸಂಗ್ರಹವಾಗಿದೆ ಎಂದಿದೆ.
ಕೇಂದ್ರ ರೈಲ್ವೇ ಸಚಿವಾಲಯದ ಸಿಆರ್ಐಎಸ್ ಟಿಕೆಟ್ ಮತ್ತು ಪ್ರಯಾಣ, ರೈಲು ಟ್ರಾಫಿಕ್ ನಿಯಂತ್ರಣ ಮತ್ತು ಕಾರ್ಯಾಚರಣೆ ಸೇರಿದಂತೆ ರೈಲ್ವೆ ಸಂಬಂಧಿಸಿದ ಹಲವು ಪ್ರಮುಖ ಕ್ಷೇತ್ರದಲ್ಲಿ ಮಾಹಿತಿ ತಂತ್ರಜ್ಞಾನ ಪರಿಹಾರ ನೀಡುತ್ತದೆ.
2016ರ ಮಾರ್ಚ್ 31ರಂದು ರೈಲ್ವೆ ಸಚಿವಾಲಯ ಇನ್ಮುಂದೆ ರೈಲಿನಲ್ಲಿ ಪ್ರಯಾಣಿಸುವ 5 ರಿಂದ 12 ವರ್ಷದ ಮಕ್ಕಳಿಗೆ ಪ್ರತ್ಯೇಕ ಆಸನ ಬೇಕೆಂದರೆ, ಸಂಪೂರ್ಣ ಟಿಕೆಟ್ ದರ ಭರಿಸಿ ಪ್ರಯಾಣಿಸಬೇಕು ಎಂಬ ಆದೇಶ ಹೊರಡಿಸಿತು. ಈ ನಿಯಮ 2016ರ ಏಪ್ರಿಲ್ 21ರಿಂದ ಜಾರಿಗೆ ಬಂದಿದೆ.
ಇದಕ್ಕೂ ಮುನ್ನ ರೈಲುಗಳಲ್ಲಿ ಪ್ರಯಾಣಿಸಿರುವ 5 ರಿಂದ 12 ವರ್ಷದ ಮಕ್ಕಳ ಪ್ರತ್ಯೇಕ ಸೀಟ್ಗೆ ಅರ್ಧ ಟಿಕೆಟ್ ದರ ಪಾವತಿಸುತ್ತಿದ್ದರು. ಪರಿಷ್ಕೃತ ಪ್ರಯಾಣ ದರ ಜಾರಿಯಾದ ಬಳಿಕ ಈ ವಯೋಮಾನದ ಮಕ್ಕಳು ಸಂಪೂರ್ಣ ಟಿಕೆಟ್ ಭರಿಸದೇ ಪ್ರತ್ಯೇಕ ಸೀಟ್ನಲ್ಲಿ ಪ್ರಯಾಣಿಸಲು ಅವಕಾಶ ನೀಡಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿತು.
ಸಿಆರ್ಐಎಸ್ 2016-17 ರಿಂದ 2022-23ರವರೆಗಿನ ಪ್ರತಿ ಹಣಕಾಸು ವರ್ಷದ ದತ್ತಾಂಶ ನೀಡಿದೆ. ದತ್ತಾಂಶದಲ್ಲಿ 3.6 ಕೋಟಿ ಮಕ್ಕಳು ಸೀಟು ಕಾಯ್ದಿರಿಸದೇ ಅರ್ಧ ಟಿಕೆಟ್ ದರ ನೀಡಿ ಪ್ರಯಾಣಿಸಿದ್ದಾಗಿ ತಿಳಿಸಿದೆ. 10 ಕೋಟಿ ಮಕ್ಕಳು ಸಂಪೂರ್ಣ ಟಿಕೆಟ್ ದರವನ್ನು ಭರಿಸಿ, ಪ್ರತ್ಯೇಕ ಸೀಟ್ನೊಂದಿಗೆ ಪ್ರಯಾಣಿಸಿದ್ದಾಗಿ ಮಾಹಿತಿ ನೀಡಿದೆ.
ಶೇ 70ರಷ್ಟು ಮಕ್ಕಳು ಸಂಪೂರ್ಣ ವೆಚ್ಚ ನೀಡಿ ಪ್ರತ್ಯೇಕ ಸೀಟ್ ಪಡೆದು ಪ್ರಯಾಣಿಸಲು ಇಚ್ಚಿಸಲು ಮುಂದಾಗಿದ್ದಾರೆ ಎಂದು ಆರ್ಟಿಐ ಅರ್ಜಿದಾರ ಶೇಖರ್ ಗೌರ್ ತಿಳಿಸಿದ್ದಾರೆ. ದೀರ್ಘಾವಧಿ ಪ್ರಯಾಣದಲ್ಲಿ ವಯಸ್ಕರ ಸೀಟಿನಲ್ಲಿಯೆ ಮಕ್ಕಳು ಪ್ರಯಾಣಿಸುವುದು ಕಷ್ಟ. ಈ ಪರಿಷ್ಕೃತ ದರ ನಿಯಮದಿಂದ ರೈಲ್ವೆಗೆ ಕೂಡ ಲಾಭ ತಂದಿದೆ ಎಂದು ತಿಳಿಸಿದರು.
ಕೋವಿಡ್ ಸಾಂಕ್ರಾಮಿಕತೆ ಸಮಯದಲ್ಲಿ ಪರಿಷ್ಕೃತ ದರ ಪ್ರಯಾಣದ ದಿಂದ 157 ಕೋಟಿ ಸಂಗ್ರಹವಾಗಿದ್ದು, ಇದು ಕಡಿಮೆ ಸಂಗ್ರಹದ ಮೊತ್ತವಾಗಿದೆ.
ಇದನ್ನೂ ಓದಿ: 108 ಅಡಿ ಎತ್ತರದ ಆದಿ ಗುರು ಶಂಕರಾಚಾರ್ಯರ ಪ್ರತಿಮೆ: ಸೆ. 21ರಂದು ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಅನಾವರಣ