ನ್ಯೂಯಾರ್ಕ್: ಭಾರತೀಯ ಮೂಲದ ಫಾರ್ಮಾಸ್ಯುಟಿಕಲ್ ಕಂಪನಿಯ ಉನ್ನತ ಕಾರ್ಯನಿರ್ವಾಹಣಾಧಿಕಾರಿಯನ್ನು ಬಂದೂಕುಧಾರಿಯೊಬ್ಬ ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ನ್ಯೂಜೆರ್ಸಿಯಲ್ಲಿ ನಡೆದಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ನ್ಯೂಜೆರ್ಸಿಯ ಪ್ಲೇನ್ಸ್‌ಬರೋ ನಿವಾಸಿಯಾದ ಶ್ರೀರಂಗ ಅರವಪಲ್ಲಿ(54) ಮೃತ ವ್ಯಕ್ತಿ. ಅರವಪಲ್ಲಿ ಅವರು ಪತ್ನಿ, ಓರ್ವ ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ. ಕಳೆದ ಮಂಗಳವಾರ ಮುಂಜಾನೆ 3.30ರಲ್ಲಿ (ಸ್ಥಳೀಯ ಕಾಲಮಾನ) ಫಿಲಡೆಲ್ಫಿಯಾದ ಹೊರಗಿನ ಕ್ಯಾಸಿನೊದಿಂದ ಹಿಂಬಾಲಿಸಿಕೊಂಡು ಬಂದಿದ್ದ ಬಂದೂಕುಧಾರಿ ಅರವಪಲ್ಲಿ ಅವರು ಮನೆಗೆ ಬಂದ ಕೆಲವೇ ನಿಮಿಷಗಳಲ್ಲಿ ಗುಂಡು ಹಾರಿಸಿ ಕೊಂದಿದ್ದಾನೆ ಎನ್ನಲಾಗ್ತಿದೆ.
ಶ್ರೀಮಂತ ಫಾರ್ಮಾಸ್ಯುಟಿಕಲ್ ಎಕ್ಸಿಕ್ಯೂಟಿವ್ ಅವರನ್ನು ಪೆನ್ಸಿಲ್ವೇನಿಯಾ ಕ್ಯಾಸಿನೊದಿಂದ ನ್ಯೂಜೆರ್ಸಿಯ ಅವರ ಮನೆಗೆ 50 ಮೈಲಿಗಳಷ್ಟು (80 ಕಿಮೀ) ಹಿಂಬಾಲಿಸಿದ್ದಾರೆ. ಅಲ್ಲಿ ಅವರ ಪತ್ನಿ ಮತ್ತು ಮಗಳು ಮಲಗಿದ್ದಾಗ ದರೋಡೆ ಮಾಡುವ ಉದ್ದೇಶದಿಂದ ಅಧಿಕಾರಿಯನ್ನು ಹತ್ಯೆ ಮಾಡಲಾಗಿದೆ ಎಂದು ಪೊಲೀಸರ ಹೇಳಿಕೆ ಉಲ್ಲೇಕಿಸಿ ನ್ಯೂಯಾರ್ಕ್ ಪೋಸ್ಟ್ ಪತ್ರಿಕೆ ವರದಿ ಮಾಡಿದೆ.
ಮಂಗಳವಾರ ಮುಂಜಾನೆ ಬೆನ್ಸಲೆಮ್‌ನ ಪಾರ್ಕ್ಸ್ ಕ್ಯಾಸಿನೊದಲ್ಲಿ ಶ್ರೀರಂಗ ಅವರು ಸುಮಾರು 10 ಸಾವಿರ ಡಾಲರ್ ಗೆದ್ದಿದ್ದರು. ಈ ನಗದನ್ನು ಮನೆಗೆ ತೆಗೆದುಕೊಂಡು ಹೋಗುತ್ತಿರಬೇಕಾದರೆ ದರೋಡೆ ಮೂಲಕ ಅವರಿಂದ ನಗದು ಕಸಿದುಕೊಳ್ಳಲು ಪೆನ್ಸಿಲ್ವೇನಿಯಾದ ನಾರ್ರಿಸ್‌ಟೌನ್‌ನ 27 ವರ್ಷದ ಜೆಕೈ ರೀಡ್-ಜಾನ್ ಶೂಟ್ ಮಾಡಿರುವ ಆರೋಪ ಇದೆ. ಪೊಲೀಸರು ಜೈಕೆ ರೀಡ್-ಜಾನ್‌ನನ್ನು ಬಂಧಿಸಿದ್ದಾರೆ.
ಅರವಪಲ್ಲಿ ಕುಟುಂಬಕ್ಕೆ ಅವರ ದುರಂತ ನಷ್ಟಕ್ಕೆ ನನ್ನ ಪ್ರಾಮಾಣಿಕ ಸಂತಾಪವನ್ನು ಸೂಚಿಸಲು ನಾನು ಬಯಸುತ್ತೇನೆ. ಇದು ಅವರ ಕುಟುಂಬ, ಸ್ನೇಹಿತರು ಮತ್ತು ತಮ್ಮ ಇಡೀ ಸಮುದಾಯಕ್ಕೆ ಅನಿರೀಕ್ಷಿತ ಮತ್ತು ಆತಂಕಕಾರಿ ಘಟನೆಯಾಗಿದೆ ಎಂದು ಪ್ಲೇನ್ಸ್‌ಬೊರೊ ಟೌನ್‌ಶಿಪ್ ಪೊಲೀಸ್ ಇಲಾಖೆಯ ಮುಖ್ಯಸ್ಥ ಫ್ರೆಡೆರಿಕ್ ಟವೆನರ್ ಹೇಳಿದ್ದಾರೆ. ಪಾರ್ಕ್ಸ್ ಕ್ಯಾಸಿನೊ ಸಿಇಒ ಎರಿಕ್ ಹೌಸ್ಲರ್ ಅರವಪಲ್ಲಿ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ.
2014 ರಿಂದ, ಅರವಪಲ್ಲಿ ಅವರು ಆರೆಕ್ಸ್ ಲ್ಯಾಬೊರೇಟರೀಸ್‌ನ ಸಿಇಒ ಆಗಿದ್ದರು. ಟ್ಯಾಬ್ಲೆಟ್‌ಗಳು ಮತ್ತು ಸಾಫ್ಟ್ ಜೆಲಾಟಿನ್ ಕ್ಯಾಪ್ಸುಲ್‌ಗಳನ್ನು ಅಭಿವೃದ್ಧಿಪಡಿಸುವ ಔಷಧೀಯ ಕಂಪನಿಯಾಗಿದೆ.