ನವದೆಹಲಿ : ಪ್ಯಾರಿಸ್ ಒಪ್ಪಂದದ ಗುರಿ ಸಾಧಿಸುವ ಹಾದಿಯಲ್ಲಿ ಭಾರತ ಸಾಗುತ್ತಿದ್ದು, ನಿರೀಕ್ಷೆಗೂ ಮೀರಿ ಗುರಿ ಸಾಧಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಹೇಳಿದ್ದಾರೆ.
ಪ್ಯಾರಿಸ್ ಒಪ್ಪಂದದ 5ನೇ ವಾರ್ಷಿಕೋತ್ಸವ ಅಂಗವಾಗಿ ಆಯೋಜಿಸಲಾಗಿದ್ದ ‘ಹವಾಮಾನ ಮಹತ್ವಾಕಾಂಕ್ಷೆ ಶೃಂಗಸಭೆ’ ಉದ್ದೇಶಿಸಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮೋದಿ ಮಾತನಾಡಿದ್ರು. ‘ನಾವು ನಮ್ಮ ಮಹತ್ವಾಕಾಂಕ್ಷೆಗಳನ್ನು ಪರಿಷ್ಕರಿಸುವುದು ಮಾತ್ರವಲ್ಲದೆ, ಈಗಾಗಲೇ ನಿಗದಿಪಡಿಸಿದ ಗುರಿಗಳ ಪ್ರತಿಯಾಗಿ ನಮ್ಮ ಸಾಧನೆಗಳನ್ನು ಪರಿಶೀಲಿಸಬೇಕಾಗಿದೆ’, ಆಗ ಮಾತ್ರ ನಮ್ಮ ಧ್ವನಿಗಳು ಮುಂದಿನ ಪೀಳಿಗೆಗೆ ವಿಶ್ವಾಸಾರ್ಹವಾಗಬಲ್ಲವು ಎಂದು ನರೇಂದ್ರ ಮೋದಿ ಹೇಳಿದ್ದಾರೆ.
ಭಾರತದಲ್ಲಿ 2005ರ ಮಟ್ಟಕ್ಕಿಂತ ಇಂಗಾಲ ಹೊರಸೂಸುವಿಕೆಯ ಪ್ರಮಾಣವನ್ನು ಶೇ.21 ರಷ್ಟು ಕಡಿಮೆ ಮಾಡಲಾಗಿದೆ. 2014ರಲ್ಲಿ 2.63 ಗಿಗಾವಾಟ್ಸ್‌ನಷ್ಟಿದ್ದ ದೇಶದ ಸೌರ ಸಾಮರ್ಥ್ಯ 2020ರಲ್ಲಿ 36 ಗಿಗಾವ್ಯಾಟ್‌ಗೆ ವೃದ್ಧಿಸಿದೆ. ದೇಶದ ನವೀಕರಿಸಬಹುದಾದ ಇಂಧನ ಸಾಮರ್ಥ್ಯ ವಿಶ್ವದಲ್ಲೇ ನಾಲ್ಕನೇ ದೊಡ್ಡದೆನಿಸಿದೆ. ಈ ಸಾಮರ್ಥ್ಯ 2022ರ ವೇಳೆಗೆ 175 ಗಿಗಾವ್ಯಾಟ್‌ಗೆ ತಲುಪಲಿದೆ. ಸದ್ಯ ಇನ್ನೂ ಹೆಚ್ಚಿನ ಮಹತ್ವಾಕಾಂಕ್ಷೆಯ ಗುರಿಯನ್ನು ಭಾರತ ಹೊಂದಿದೆ ಎಂದರು.
2030ರ ವೇಳೆಗೆ ನವೀಕರಿಸಬಹುದಾದ ಇಂಧನ ಸಾಮರ್ಥ್ಯದ 450 ಗಿಗಾವ್ಯಾಟ್‌ಗೆ ವೃದ್ಧಿಸುವ ನಿರೀಕ್ಷೆ ಇದೆ. ಅರಣ್ಯ ವ್ಯಾಪ್ತಿಯನ್ನು ವಿಸ್ತರಿಸುವಲ್ಲಿ ಮತ್ತು ಜೀವವೈವಿಧ್ಯತೆಯನ್ನು ಕಾಪಾಡುವಲ್ಲಿ ಭಾರತ ಯಶಸ್ವಿಯಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ದೇಶದಲ್ಲಿ ಅರಣ್ಯ ಪ್ರದೇಶವನ್ನು ವಿಸ್ತರಿಸುವಲ್ಲಿ ಮತ್ತು ನಮ್ಮ ಜೀವವೈವಿಧ್ಯತೆಯನ್ನು ಕಾಪಾಡುವಲ್ಲಿ ನಾವು ಯಶಸ್ವಿಯಾಗಿದ್ದೇವೆ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.