ನವದೆಹಲಿ: ಅಫ್ಘಾನಿಸ್ತಾನವನ್ನ ತಾಲಿಬಾನ್ ಉಗ್ರರು ಸಂಪೂರ್ಣವಾಗಿ ತಮ್ಮ ಹತೋಟಿಗೆ ಪಡೆದುಕೊಂಡ ನಂತರ ಆ ದೇಶದ ಜನರ ಬದುಕು ಅಕ್ಷರಶಹ ನರಕಯಾತನೆಯಾಗಿದೆ. ಆಹಾರ, ಉದ್ಯೋಗ ಸಮಸ್ಯೆ ಸೇರಿದಂತೆ ಅನೇಕ ರೀತಿಯ ತೊಂದರೆ ಉದ್ಭವವಾಗಿದೆ. ಹೀಗಾಗಿ ಅಲ್ಲಿನ ಜನರಿಗೆ ಭಾರತ ಮಾನವೀಯತೆಯಿಂದ ನೆರವು ನೀಡುತ್ತಿದೆ.
ಅಫ್ಘಾನಿಸ್ತಾನಕ್ಕೆ ಈಗಾಗಲೇ 50 ಸಾವಿರ ಮೆಟ್ರಿಕ್ ಟನ್ ಗೋಧಿ ಸೇರಿದಂತೆ ಅಗತ್ಯ ಜೀವ ರಕ್ಷಕ ಔಷಧ ಒದಗಿಸಿರುವ ಭಾರತ ಇದೀಗ 5 ಲಕ್ಷ ಕೋವಿಡ್ ವ್ಯಾಕ್ಸಿನ್ ರವಾನಿಸಿದೆ. ಕಾಬೂಲ್ನಲ್ಲಿರುವ ಇಂದಿರಾ ಗಾಂಧಿ ಆಸ್ಪತ್ರೆಗೆ ಲಸಿಕೆ ಹಸ್ತಾಂತರ ಮಾಡಲಾಗಿದ್ದು, ಮುಂದಿನ ಕೆಲ ವಾರಗಳಲ್ಲಿ ಹೆಚ್ಚುವರಿಯಾಗಿ 5 ಲಕ್ಷ ಕೋವಿಡ್ ಡೋಸ್ ಪೂರೈಸುವುದಾಗಿ ಅಭಯ ನೀಡಿದೆ.
ಅಫ್ಘಾನಿಸ್ತಾನದಲ್ಲಿ ಅರಾಜಕತೆ ಉಂಟಾಗಿರುವ ಕಾರಣ ಭಾರತ ಆಹಾರ ಧಾನ್ಯಗಳು, ಅಗತ್ಯ ಔಷಧ ಹಾಗೂ ಕೋವಿಡ್ ಡೋಸ್ ನೀಡಲು ನಿರ್ಧರಿಸಿದ್ದು, ಮಾನವೀಯತೆ ಆಧಾರದ ಮೇರೆಗೆ ಈ ಸಹಾಯ ಮಾಡುತ್ತಿದೆ.
ಇದನ್ನೂ ಓದಿರಿ: ಮಹಾರಾಷ್ಟ್ರದಲ್ಲಿ ಕೊರೊನಾ ರಣಕೇಕೆ.. ನಟಿ ಮೃಣಾಲ್ ಠಾಕೂರ್ಗೂ ವಕ್ಕರಿಸಿದ ಮಹಾಮಾರಿ
ಕಳೆದ ಡಿಸೆಂಬರ್ ತಿಂಗಳಲ್ಲಿ ಭಾರತ ವಿಶ್ವ ಆರೋಗ್ಯ ಸಂಸ್ಥೆ ಮೂಲಕ ಅಫ್ಘಾನಿಸ್ತಾನಕ್ಕೆ 1.6 ಟನ್ ವೈದ್ಯಕೀಯ ನೆರವು ನೀಡಿದ್ದು, ಇದೀಗ ಮತ್ತಷ್ಟು ಸಹಾಯಹಸ್ತ ಚಾಚಿದೆ. ಪಾಕಿಸ್ತಾನದ ವಾಘಾ ಗಡಿ ಮೂಲಕ ಅಫ್ಘಾನಿಸ್ತಾನಕ್ಕೆ ಅಗತ್ಯ ವಸ್ತುಗಳ ನೆರವು ನೀಡಲಾಗುತ್ತಿದೆ.