ನವದೆಹಲಿ: ಒಂದರಿಂದ ನಾಲ್ಕು ಲಕ್ಷ ಗಡಿ ದಾಟಿದ್ದ ಭಾರತದ ದೈನಂದಿನ ಕೋವಿಡ್ ಪ್ರಕರಣಗಳು ಇದೀಗ ಸಾಕಷ್ಟು ಇಳಿಕೆ ಕಂಡಿವೆ. 91 ದಿನಗಳ ಬಳಿಕ ದೇಶದಲ್ಲಿ ಅತಿ ಕಡಿಮೆ ಅಂದರೆ 42,640 ಸೋಂಕಿತರು ಪತ್ತೆಯಾಗಿದ್ದಾರೆ. ಸಾವಿನ ಸಂಖ್ಯೆಯೂ ನಿಧಾನವಾಗಿ ತಗ್ಗುತ್ತಿದ್ದು, ನಿನ್ನೆ ಒಂದೇ ದಿನ 1,167 ಮಂದಿ ಬಲಿಯಾಗಿದ್ದಾರೆ.
ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 2,99,77,861 ಹಾಗೂ ಮೃತರ ಸಂಖ್ಯೆ 3,89,302ಕ್ಕೆ ಏರಿಕೆಯಾಗಿದೆ. ಇತ್ತ ಒಟ್ಟು ಸೋಂಕಿತರ ಪೈಕಿ 2,89,26,038 ಮಂದಿ ವೈರಸ್ನಿಂದ ಚೇತರಿಸಿಕೊಂಡಿದ್ದು, ಗುಣಮುಖರ ಪ್ರಮಾಣ ಶೇ.96.49ಕ್ಕೆ ಏರಿಕೆಯಾಗಿದೆ. ಆ್ಯಕ್ಟಿವ್ ಕೇಸ್ಗಳ ಸಂಖ್ಯೆ 6,62,521ಕ್ಕೆ ಇಳಿಕೆಗಾಗಿದೆ ಎಂದು ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
ಇದನ್ನೂ ಓದಿ: ದೇಶಾದ್ಯಂತ ಒಂದೇ ದಿನ ದಾಖಲೆಯ 80 ಲಕ್ಷ ಕೋವಿಡ್ ವ್ಯಾಕ್ಸಿನ್; ನಮೋ ಅಭಿನಂದನೆ
ನಿನ್ನೆ ಒಂದೇ ದಿನ 80 ಲಕ್ಷ ಮಂದಿಗೆ ಲಸಿಕೆ
ಪರಿಷ್ಕೃತ ವ್ಯಾಕ್ಸಿನೇಷನ್ ಮಾರ್ಗಸೂಚಿಯನ್ನು ಜಾರಿಗೊಳಿಸಿದ್ದ ಕೇಂದ್ರ ಸರ್ಕಾರ ನಿನ್ನೆಯಿಂದ 18 ವರ್ಷ ಮೇಲ್ಪಟ್ಟ ಎಲ್ಲಾ ವಯಸ್ಕರಿಗೂ ಉಚಿತವಾಗಿ ಕೋವಿಡ್ ಲಸಿಕೆ ನೀಡಲು ಆರಂಭಿಸಿದೆ. ಲಸಿಕೆ ಕೊರತೆಯಿದ್ದ ರಾಜ್ಯಗಳಿಗೆ ಲಸಿಕೆ ಪೂರೈಸಿದೆ. ಹೀಗಾಗಿ ದೇಶದ ಲಸಿಕಾಭಿಯಾನ ಮತ್ತಷ್ಟು ವೇಗ ಪಡೆದುಕೊಂಡಿದ್ದು, ನಿನ್ನೆ ಒಂದೇ ದಿನ 80 ಲಕ್ಷ ಮಂದಿಗೆ ಲಸಿಕೆ ನೀಡಲಾಗಿತ್ತು. ಒಟ್ಟಾರೆ ಇಲ್ಲಿಯವರೆಗೆ ಕೊರೊನಾ ಲಸಿಕೆಯ 28,87,66,201 ಡೋಸ್ಗಳನ್ನು ನೀಡಲಾಗಿದೆ.