ನವದೆಹಲಿ: ದೇಶದಲ್ಲಿ ದಿನದಿಂದ ದಿನಕ್ಕೆ ಕೋವಿಡ್ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದೆ. ಕಳೆದ 24 ಗಂಟೆಗಳಲ್ಲಿ ದೇಶಾದ್ಯಂತ 12,213 ಹೊಸ ಕೇಸ್‌ಗಳು ದಾಖಲಾಗಿದೆ. ನಿನ್ನೆಗೆ ಹೊಲಿಕೆ ಮಾಡಿದರೆ ಮೂರುವರೆ ಸಾವಿರಕ್ಕಿಂತ ಹೆಚ್ಚು ಪ್ರಕರಣಗಳು ಜಾಸ್ತಿ ಕಂಡು ಬಂದಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.
ಕಳೆದ 24 ಗಂಟೆಗಳಲ್ಲಿ ದೇಶಾದ್ಯಂತ 7,624 ಜನರು ಕೋವಿಡ್ನಿಂದ ಗುಣಮುಖರಾಗಿದ್ದು, ವಿವಿಧ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ. ಈವರೆಗೆ 4,26,74,712 ಜನರು ಕೋವಿಡ್ನಿಂದ ಗುಣಮುಖರಾಗಿದ್ದಾರೆ. ಸದ್ಯ ದೇಶದಲ್ಲಿ 58,215 ಸಕ್ರಿಯ ಪ್ರಕರಣಗಳಿವೆ. ಕಳೆದ 24 ಗಂಟೆಯಲ್ಲಿ ಕೋವಿಡ್ನಿಂದ 11 ಜನ ಸಾವನ್ನಪ್ಪಿದ್ದು, ಈವರೆಗೆ ಕೋವಿಡ್ ಸಾವಿನ ಸಂಖ್ಯೆ 5,24,803 ಇದೆ.
ಓದಿ: ರಾಜ್ಯದಲ್ಲಿ ಇಂದು 648 ಮಂದಿಗೆ ಕೊರೊನಾ ಸೋಂಕು ದೃಢ; ಓರ್ವ ಸಾವು
ಕರ್ನಾಟಕದಲ್ಲೂ ಕೊರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ರಾಜ್ಯದಲ್ಲಿ 23,452 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದ್ದು, ಇದರಲ್ಲಿ 648 ಮಂದಿಗೆ ಸೋಂಕು ದೃಢಪಟ್ಟಿದೆ. 532 ಮಂದಿ ಡಿಸ್ಚಾರ್ಜ್ ಆಗಿದ್ದು, ಈವರೆಗೆ ಒಟ್ಟು 39,13,885 ಮಂದಿ ಗುಣಮುಖರಾಗಿದ್ದಾರೆ. ಕಳೆದ 24 ಗಂಟೆಗಳಲ್ಲಿ ಸೋಂಕಿತರೊಬ್ಬರು ಮೃತಪಟ್ಟಿದ್ದಾರೆ.
ತಮಿಳುನಾಡಿನಲ್ಲಿ ವಿದೇಶದಿಂದ ಹಿಂದಿರುಗಿದ ಐದು ಮಂದಿ ಸೇರಿದಂತೆ 476 ಜನರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, ಇಲ್ಲಿಯವರೆಗೆ 34,58,445 ಕ್ಕೆ ತಲುಪಿದೆ. ಎರಡು ತಿಂಗಳ ಬಳಿಕ ಸಾವಿನ ಪ್ರಕರಣ ಮುನ್ನೆಲೆಗೆ ಬಂದಿದ್ದು, ಕಳೆದ 24 ಗಂಟೆಯಲ್ಲಿ ತಂಜಾವೂರಿನಲ್ಲಿ 18 ವರ್ಷದ ಯುವತಿಯೊಬ್ಬಳು ವೈರಸ್‌ಗೆ ಬಲಿಯಾಗಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಸಾವಿನ ಸಂಖ್ಯೆ 38,026ಕ್ಕೆ ಏರಿದೆ. ಮಾರ್ಚ್ 17 ರಂದು ತಮಿಳುನಾಡಿನಲ್ಲಿ ಕೋವಿಡ್ ನಿಂದ ಕೊನೆಯ ಸಾವು ವರದಿಯಾಗಿತ್ತು ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಭಾರತದ ಕೋವಿಡ್ ವ್ಯಾಕ್ಸಿನೇಷನ್ ಡ್ರೈವ್ನಲ್ಲಿ 195.7 ಕೋಟಿ ಮೀರಿ ಮುನ್ನಡೆಯುತ್ತಿದೆ.