ನವದೆಹಲಿ: ಕೋವಿಡ್ ನಂತರದ ದಿನಗಳಲ್ಲಿ ದೇಶದ ಆರ್ಥಿಕತೆ ಚೇತರಿಕೆ ಕಾಣುತ್ತಿದೆ ಎಂಬುದು ಸ್ಪಷ್ಟವಾಗಿ ಗೋಚರಿಸುತ್ತಿದೆ. 2022ನೇ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದಲ್ಲಿ (ಜುಲೈ-ಸೆಪ್ಟೆಂಬರ್) ದೇಶದ ಜಿಡಿಪಿ ಶೇಕಡಾ 8.4ಕ್ಕೆ ಏರಿಕೆಯಾಗಿದೆ.
ರಾಷ್ಟ್ರೀಯ ಸಾಂಖ್ಯಿಕ ಕಚೇರಿ (ಎನ್‌ಎಸ್‌ಒ) ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ಕೋವಿಡ್ ರೂಪಾಂತರಿ ತಳಿ ಒಮಿಕ್ರೋನ್ ಒಂದು ವೇಳೆ ಹಾನಿ ಉಂಟು ಮಾಡದಿದ್ದರೆ, 2020ನೇ ಹಣಕಾಸು ವರ್ಷದಲ್ಲಿದ್ದ ಜಿಡಿಪಿ ಮಟ್ಟವನ್ನು ಅಂದರೆ ಕೋವಿಡ್ ಕಾಣಿಸಿಕೊಳ್ಳುವುದಕ್ಕೂ ಮೊದಲಿದ್ದ ಆರ್ಥಿಕ ಸ್ಥಿತಿಯನ್ನು ಈ ಹಣಕಾಸು ವರ್ಷದಲ್ಲಿ ತಲುಪಲು ಸಾಧ್ಯವಿದೆ.
ಇದೇ ಹಣಕಾಸು ವರ್ಷದ ಮೊದಲ ತ್ರೈಮಾಸಿಕದ ದೇಶದಲ್ಲಿ ಶೇಕಡಾ 20.1ರಷ್ಟು ಜಿಡಿಪಿ ದಾಖಲಾಗಿತ್ತು. ಕೋವಿಡ್ ಕಾರಣಗಳಿಂದ ದಾಖಲಾಗಿದ್ದು ಆಗಿನ ಮೂಲ ದರಕ್ಕೆ ಹೋಲಿಸಿದರೆ, ಅದು ಅತ್ಯಂತ ಕಡಿಮೆಯಾಗಿತ್ತು. ಈಗ ಪ್ರಕಟವಾಗಿರುವ ಎರಡನೇ ತ್ರೈಮಾಸಿಕದಲ್ಲಿ ಶೇಕಡಾ 8.4ರಷ್ಟು ಜಿಡಿಪಿ ದಾಖಲಾಗಿದ್ದು, ಹಿಂದಿನ ವರ್ಷ ಇದೇ ತ್ರೈಮಾಸಿಕದಲ್ಲಿ ಶೇಕಡಾ 7.4ರಷ್ಟು ಜಿಡಿಪಿ ದಾಖಲಾಗಿತ್ತು. ಅದಕ್ಕೆ ಹೋಲಿಸಿದರೆ, ಈಗಿನ ಜಿಡಿಪಿ ಸಾಕಷ್ಟು ಸುಧಾರಣೆ ಕಂಡಿದೆ.
ಪ್ರಸಕ್ತ ಹಣಕಾಸು ವರ್ಷದ ಮೊದಲಾರ್ಧದ ಅವಧಿಯಾದ ಏಪ್ರಿಲ್ನಿಂದ–ಸೆಪ್ಟೆಂಬರ್ ಅವಧಿಯಲ್ಲಿ ಶೇಕಡಾ 13.7ರಷ್ಟು ಜಿಡಿಪಿ ಬೆಳವಣಿಗೆ ಸಾಧಿಸಿತ್ತು. ಹಿಂದಿನ ಹಣಕಾಸು ವರ್ಷದ ಮೊದಲಾರ್ಧ ಅಂದರೆ ಏಪ್ರಿಲ್ನಿಂದ–ಸೆಪ್ಟೆಂಬರ್ ಅವಧಿಯಲ್ಲಿ ಜಿಡಿಪಿ ಶೇಕಡಾ 15.9ರಷ್ಟಿತ್ತು ಎಂದು ರಾಷ್ಟ್ರೀಯ ಸಾಂಖ್ಯಿಕ ಕಚೇರಿ ಹೇಳಿದೆ.
ಎರಡನೇ ತ್ರೈಮಾಸಿಕದಲ್ಲಿ ಕೃಷಿ ವಲಯದಲ್ಲಿ ಶೇಕಡಾ 4.5ರಷ್ಟು, ನಿರ್ಮಾಣ ವಲಯ ಶೇಕಡಾ 7.5ರಷ್ಟು, ಗಣಿ ವಲಯ ಶೇ 15.4ರಷ್ಟು ಬೆಳವಣಿಗೆ ಕಂಡಿವೆ. ಕಚ್ಚಾತೈಲದ ಉತ್ಪಾದನೆಯಲ್ಲಿ ಶೇಕಡಾ 2.2 ರಷ್ಟು ಬೆಳವಣಿಗೆ ಕುಸಿತವಾಗಿದೆ. ಆದರೆ ಮೂಲಸೌಕರ್ಯ ವಲಯಗಳಲ್ಲಿ ಒಟ್ಟಾರೆ ಶೇಕಡಾ 7.4 ರಷ್ಟು ಬೆಳವಣಿಗೆ ಕಂಡುಬಂದಿದೆ. ಕಲ್ಲಿದ್ದಲು, ಉಕ್ಕು, ನೈಸರ್ಗಿಕ ಅನಿಲ, ರಸಗೊಬ್ಬರಗಳು, ಸಿಮೆಂಟ್, ರಿಫೈನರಿ ಮತ್ತು ವಿದ್ಯುತ್ ಉತ್ಪಾದನೆಯು ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಸ್ವಲ್ಪ ಮಟ್ಟಿಗೆ ಹೆಚ್ಚಾಗಿದೆ ಎಂದು ಎನ್‌ಎಸ್‌ಒ ಹೇಳಿದೆ.
ಇದನ್ನೂ ಓದಿ: ಸಾರ್ವಜನಿಕ ವಲಯದ ವಿಮಾ ಕಂಪನಿಗಳನ್ನು ವಿಲೀನಗೊಳಿಸುವ ಪ್ರಸ್ತಾಪವಿಲ್ಲ: ಕೇಂದ್ರ ಸರ್ಕಾರ