ಕಿನ್ನೌರ್: ದೇಶದ ಮೊದಲ ಮತದಾರ ಮಾಸ್ಟರ್ ಶ್ಯಾಮ್ ಸರನ್ ನೇಗಿ ಅವರಿಗೆ ಈಗ 102 ನೇ ವಯಸ್ಸು. ಆದರೆ ಪ್ರಜಾಪ್ರಭುತ್ವದ ಮಹಾನ್ ಹಬ್ಬ ಅಂದರೆ ಚುನಾವಣೆಯಲ್ಲಿ ಮತದಾನ ಮಾಡಲು ಅವರಲ್ಲಿ 1951 ರಲ್ಲಿ ಇದ್ದಷ್ಟೇ ಉತ್ಸಾಹ ಈಗಲೂ ಇದೆ.
1951ರಲ್ಲಿ ಇವರು ಪ್ರಥಮ ಬಾರಿಗೆ ಮತ ಚಲಾವಣೆ ಮಾಡಿ, ಆಗ ದೇಶದ ಮೊದಲ ಮತದಾರ ಎನಿಸಿದ್ದರು. ಈಗ 2022ರ ಹಿಮಾಚಲ ಪ್ರದೇಶ ಚುನಾವಣೆಯಲ್ಲೂ ಮತಗಟ್ಟೆಗೆ ಹೋಗಿ ಮತ ಚಲಾಯಿಸುವ ನಿರ್ಧಾರ ಮಾಡಿದ್ದಾರೆ. ಅವರ ಅನಾರೋಗ್ಯವನ್ನು ನೋಡಿಕೊಂಡು ಅವರಿಗೆ ಮನೆಯಲ್ಲೇ ಮತದಾನದ ವ್ಯವಸ್ಥೆ ಮಾಡಲು ಚುನಾವಣಾ ಆಯೋಗ ಚಿಂತನೆ ನಡೆಸಿತ್ತು. ಆದರೆ ಶ್ಯಾಮ್ ಸರನ್ ನೇಗಿ ಮತಗಟ್ಟೆಗೆ ಹೋಗಿಯೇ ಮತ ಚಲಾಯಿಸಲಿದ್ದಾರೆ.
12ಡಿ ಫಾರಂ ವಾಪಸ್: ಚುನಾವಣಾ ಆಯೋಗದ ಪರವಾಗಿ ಅಧಿಕಾರಿಗಳು 12ಡಿ ನಮೂನೆ ಇವರ ಮನೆಗೆ ತಂದಿದ್ದರು. ಈ ಮೂಲಕ ಇವರುಮನೆಯಲ್ಲಿಯೇ ಮತದಾನ ಮಾಡಬಹುದಿತ್ತು. ಆದರೆ ಮಾಸ್ಟರ್ ಶ್ಯಾಮ್ ಸರಣ್ ನೇಗಿ ಅವರು 12ಡಿ ನಮೂನೆಯನ್ನು ಅಧಿಕಾರಿಗಳಿಗೆ ಹಿಂದಿರುಗಿಸಿದರು.
ಕೆಂಪು ಹಾಸಿನ ಸ್ವಾಗತ: ಜಿಲ್ಲಾ ಚುನಾವಣಾಧಿಕಾರಿ ಅಬೀದ್ ಹುಸೇನ್ ಸಾದಿಕ್ ಮಾತನಾಡಿ, ದೇಶದ ಮೊದಲ ಮತದಾರರಾದ ಮಾಸ್ಟರ್ ಶ್ಯಾಮ್ ಸರನ್ ನೇಗಿ ಅವರು 12ಡಿ ನಮೂನೆಯನ್ನು ಹಿಂದಿರುಗಿಸಿದ್ದು, ಅವರೇ ನ.12ರಂದು ತಮ್ಮ ಮತಗಟ್ಟೆಗೆ ಬಂದು ಮತದಾನ ಮಾಡಲಿದ್ದಾರೆ. ಅವರು ಮತದಾನ ಮಾಡಲು ಬಂದಾಗ ಅವರಿಗೆ ಕಲ್ಪಾ ಮತಗಟ್ಟೆ ಕೇಂದ್ರದಲ್ಲಿ ಕೆಂಪು ಹಾಸಿನ ಸ್ವಾಗತ ಕೋರಲಾಗುವುದು ಎಂದು ಹೇಳಿದರು.
ಮೊದಲ ಮತದಾರನಾಗಿದ್ದು ಹೇಗೆ?: ದೇಶದಲ್ಲಿ ಮೊದಲ ಲೋಕಸಭೆ ಚುನಾವಣೆ ಫೆಬ್ರವರಿ 1952 ರಲ್ಲಿ ನಡೆಯಿತು. ಆದರೆ ಕಿನ್ನೌರ್‌ನಲ್ಲಿ ಭಾರಿ ಹಿಮಪಾತದಿಂದಾಗಿ 25 ಅಕ್ಟೋಬರ್ 1951 ರಂದೇ ಚುನಾವಣೆ ನಡೆದು ಹೋದವು. ಚುನಾವಣೆ ವೇಳೆ ಶ್ಯಾಮ್ ಸರನ್ ನೇಗಿ ಕಿನ್ನೌರ್ ನ ಮೂರಾಂಗ್ ಶಾಲೆಯಲ್ಲಿ ಶಿಕ್ಷಕರಾಗಿದ್ದು, ಚುನಾವಣಾ ಕರ್ತವ್ಯ ನಿರ್ವಹಿಸುತ್ತಿದ್ದರು. ಮತದಾನ ಮಾಡಲು ಇವರು ತುಂಬಾ ಉತ್ಸುಕರಾಗಿದ್ದರು.
ಅವರನ್ನು ಶೌಂಗ್‌ಥಾಂಗ್‌ನಿಂದ ಮೂರಾಂಗ್‌ಗೆ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಆದರೆ ಅವರು ಕಲ್ಪಾ ಮತಗಟ್ಟೆಯಲ್ಲಿ ಮತ ಚಲಾಯಿಸಬೇಕಿತ್ತು. ಹೀಗಾಗಿ ಅವರು ಬೆಳಗ್ಗೆ ಮತ ಚಲಾಯಿಸಿ ಕರ್ತವ್ಯಕ್ಕೆ ಹೋಗಲು ಅನುಮತಿ ಕೋರಿದ್ದರು. ನಂತರ ಮತದಾನದ ದಿನ ಬೆಳಗ್ಗೆ ಮತಗಟ್ಟೆಗೆ ಬಂದಿದ್ದರು. 6.15ಕ್ಕೆ ಚುನಾವಣಾ ತಂಡ ಸ್ಥಳಕ್ಕೆ ಆಗಮಿಸಿತ್ತು. ನೇಗಿ ತಮಗೆ ಬೇಗನೆ ಮತದಾನ ಮಾಡಲು ಅವಕಾಶ ನೀಡುವಂತೆ ವಿನಂತಿಸಿದರು. ಅಧಿಕಾರಿಗಳು ರಿಜಿಸ್ಟರ್ ತೆರೆದು ಅವರಿಗೆ ಸ್ಲಿಪ್ ನೀಡಿದರು. ಹೀಗೆ ಅವರು ಮತದಾನ ಮಾಡಿದ ತಕ್ಷಣ ಇತಿಹಾಸ ನಿರ್ಮಾಣವಾಯಿತು. ಈ ಮೂಲಕ ಮಾಸ್ಟರ್ ಶ್ಯಾಮ್ ಸರನ್ ನೇಗಿ ಸ್ವತಂತ್ರ ಭಾರತದ ಮೊದಲ ಮತದಾರರಾದರು.