ನವದೆಹಲಿ: ಜಲಗಡಿ ದಾಟಿ ಶ್ರೀಲಂಕಾ ಸಮುದ್ರದಲ್ಲಿ ಮೀನುಗಾರಿಕೆ ಮಾಡಿರುವ ಆರೋಪದ ಮೇಲೆ ಬಂಧಿಯಾಗಿರುವ ಮೀನುಗಾರರ ಬಿಡುಗಡೆ ಬಗ್ಗೆ ಖಚಿತಪಡಿಸಿಕೊಳ್ಳುವಂತೆ ಶ್ರೀಲಂಕಾಗೆ ಭಾರತ ಕರೆ ನೀಡಿದೆ.
ನಿನ್ನೆ ಉಭಯ ರಾಷ್ಟ್ರಗಳ ನಡುವೆ ಜಂಟಿ ಕಾರ್ಯಕಾರಿ ತಂಡದ (Joint Working Group) ನಾಲ್ಕನೇ ಸಭೆ ನಡೆದಿದೆ. ಈ ವರ್ಚುವಲ್ ಸಭೆಯಲ್ಲಿ ಎರಡೂ ದೇಶಗಳ ನೌಕಾಪಡೆ ಮತ್ತು ಕೋಸ್ಟ್ ಗಾರ್ಡ್ ನಡುವಿನ ಸಹಕಾರ, ಸಂಬಂಧದ ಬಗ್ಗೆ ಚರ್ಚೆ ನಡೆಸಲಾಗಿದೆ.
ಜಲಗಡಿ ದಾಟಿ ಶ್ರೀಲಂಕಾದ ಸಮುದ್ರದಲ್ಲಿ ಮೀನುಗಾರಿಗೆ ಮಾಡಿದ್ದಕ್ಕೆ ಇತ್ತೀಚೆಗೆ ಭಾರತದ 40 ಮೀನುಗಾರರನ್ನು ಬಂಧಿಸಿದ್ದ ಶ್ರೀಲಂಕಾ ನೌಕಾಪಡೆ, 6 ದೋಣಿಗಳನ್ನು ವಶಪಡಿಸಿಕೊಂಡಿತ್ತು. ಬಂಧಿತ ಮೀನುಗಾರರ ಬಿಡುಗಡೆಯನ್ನು ಖಚಿತಪಡಿಸಿಕೊಳ್ಳಲು ಹಾಗೂ ಅಲ್ಲಿಯವರೆಗೆ ಅವರಿಗೆ ಅಗತ್ಯ ಸೌಲಭ್ಯ ಒದಗಿಸುವಂತೆ ಭಾರತೀಯ ನಿಯೋಗದ ಮುಖಂಡರು ಸಭೆಯಲ್ಲಿ ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ರಾಜ್ಕೋಟ್ನಲ್ಲಿ ಏಮ್ಸ್ ನಿರ್ಮಾಣಕ್ಕೆ ಇಂದು ಪ್ರಧಾನಿ ಮೋದಿಯಿಂದ ಅಡಿಗಲ್ಲು
2019 ರ ನವೆಂಬರ್‌ನಲ್ಲಿ ಶ್ರೀಲಂಕಾ ಅಧ್ಯಕ್ಷ ಗೊಟಬಯ ರಾಜಪಕ್ಸೆ ಭಾರತಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಶ್ರೀಲಂಕಾದ ವಶದಲ್ಲಿರುವ ಎಲ್ಲಾ ಮೀನುಗಾರಿಕಾ ದೋಣಿಗಳನ್ನು ಬಿಡುಗಡೆ ಮಾಡುವ ವಿಚಾರವನ್ನು ಭಾರತ ಪ್ರಸ್ತಾಪಿಸಿತ್ತು. ದ್ವಿಪಕ್ಷೀಯ ಶೃಂಗಸಭೆಯಲ್ಲಿ ಕೂಡ ಪ್ರಧಾನಿ ನರೇಂದ್ರ ಮೋದಿ ಮತ್ತು ಶ್ರೀಲಂಕಾದ ಪ್ರಧಾನಿ ಮಹಿಂದಾ ರಾಜಪಕ್ಸೆ ಮೀನುಗಾರರಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಲು ಒಪ್ಪಿಕೊಂಡಿದ್ದರು.
ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆ ಸೇರಿದಂತೆ ಮೀನುಗಾರಿಕೆ ಸಂಬಂಧಿತ ಭಾರತ ಸರ್ಕಾರದ ಇತರ ಯೋಜನೆಗಳ ಬಗ್ಗೆ ಕೂಡ ಸಭೆಯಲ್ಲಿ ಅಧಿಕಾರಿಗಳು ಶ್ರೀಲಂಕಾಗೆ ಮಾಹಿತಿ ನೀಡಿದರು.
ಭಾರತ - ಶ್ರೀಲಂಕಾ ನಡುವೆ ಜಂಟಿ ಕಾರ್ಯಕಾರಿ ತಂಡದ ಮೊದಲ ಸಭೆ 2016ರ ಡಿಸೆಂಬರ್ 31 ರಂದು ನವದೆಹಲಿಯಲ್ಲಿ ನಡೆದಿತ್ತು. 2017ರ ಏಪ್ರಿಲ್ 7 ರಂದು ಕೊಲಂಬೊದಲ್ಲಿ 2ನೇ ಹಾಗೂ 2017 ರ ಅಕ್ಟೋಬರ್ 13 ರಂದು ನವದೆಹಲಿಯಲ್ಲಿ 3ನೇ ಸಭೆ ನಡೆದಿತ್ತು.