ನವದೆಹಲಿ : ಚೀನಾ ಜಲ ಪ್ರದೇಶದಲ್ಲಿ ಎರಡು ಹಡಗುಗಳಲ್ಲಿ ಸಿಲುಕಿಕೊಂಡಿರುವ 39 ಭಾರತೀಯ ನಾವಿಕರಿಗೆ ತುರ್ತು ಮತ್ತು ಸಮಯೋಚಿತ ಸಹಾಯ ನೀಡುವಂತೆ ಭಾರತ ಕೋರಿದೆ.
ಭಾರತದ ಬೃಹತ್ ಸರಕು ಸಾಗಾಣಿಕೆ ಹಡಗು ಎಂ ವಿ ಜಗ್ ಆನಂದ್ ಜೂನ್ 13ರಿಂದ ಚೀನಾದ ಹೆಬೈ ಪ್ರಾಂತ್ಯದ ಜಿಂಗ್ಟಾಂಗ್ ಬಂದರಿನ ಬಳಿ ಲಂಗರು ಹಾಕಿದೆ. ಅದರಲ್ಲಿ 23 ಭಾರತೀಯ ನಾವಿಕರು ಇದ್ದಾರೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾಸ್ತವ ತಿಳಿಸಿದ್ದಾರೆ.
ಅದೇ ರೀತಿ ಸೆಪ್ಟೆಂಬರ್ 20ರಿಂದ ಚೀನಾದ ಕಾಫೀಡಿಯನ್ ಬಂದರಿನ ಬಳಿ ಎಂ ವಿ ಅನಾಸ್ತಾಸಿಯಾ ಎಂಬ ಮತ್ತೊಂದು ಹಡಗು ಲಂಗರು ಹಾಕಿದೆ. ಅದರಲ್ಲಿ 16 ಭಾರತೀಯ ಪ್ರಜೆಗಳೊಂದಿಗೆ ಹಡಗಿನ ಸಿಬ್ಬಂದಿ ಸಿಲುಕಿದ್ದಾರೆ. ಈ ಎರಡೂ ಹಡಗುಗಳು ತಮ್ಮ ಸರಕುಗಳನ್ನು ಖಾಲಿ ಮಾಡಲು ಕಾಯುತ್ತಿವೆ. ದೀರ್ಘ ವಿಳಂಬದ ಕಾರಣ ಸಿಬ್ಬಂದಿ ಮೇಲೆ ಒತ್ತಡ ಹೆಚ್ಚುತ್ತಿದೆ ಎಂದು ಶ್ರೀವಾಸ್ತವ ಹೇಳಿದ್ದಾರೆ.
ಓದಿ: ಮತ್ತೇ 10 ಡ್ರೋನ್‌ಗಳನ್ನು ಖರೀದಿಸಲು ಮುಂದಾದ ನೌಕಾಪಡೆ : ಪ್ರಸ್ತಾಪ ಅನುಮೋದಿಸಿದ ಸರ್ಕಾರ
ನಮ್ಮ ಸಿಬ್ಬಂದಿಗೆ ಹೆಚ್ಚುತ್ತಿರುವ ಕಷ್ಟಕರ ಪರಿಸ್ಥಿತಿ ಮತ್ತು ಕಾಳಜಿಯನ್ನು ಗಮನದಲ್ಲಿಟ್ಟುಕೊಂಡು, ಈ ಎರಡು ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಬೀಜಿಂಗ್, ಹೆಬೀ ಮತ್ತು ಟಿಯಾನ್ಜಿನ್‌ನ ಚೀನಾದ ಅಧಿಕಾರಿಗಳೊಂದಿಗೆ ಬೀಜಿಂಗ್ನಲ್ಲಿರುವ ಭಾರತೀಯ ರಾಯಭಾರ ಕಚೇರಿ ನಿಕಟ ಮತ್ತು ನಿರಂತರ ಸಂಪರ್ಕ ಹೊಂದಿದೆ. ವಿದೇಶಾಂಗ ಇಲಾಖೆ ಕೂಡ ಈ ವಿಷಯದ ಬಗ್ಗೆ ನವದೆಹಲಿಯ ಚೀನಿ ರಾಯಭಾರ ಕಚೇರಿಯೊಂದಿಗೆ ಮಾತುಕತೆ ನಡೆಸಿದೆ ಎಂದು ಅನುರಾಗ್ ಶ್ರೀವಾಸ್ತವ ತಿಳಿಸಿದ್ದಾರೆ.
ಈ ವಿಷಯದಲ್ಲಿ ಚೀನಾದ ಪ್ರತಿಕ್ರಿಯೆಯನ್ನು ನಾವು ಗಮನಿಸಿದ್ದೇವೆ. ಅವರು ಇದನ್ನು ಗಂಭೀರವಾಗಿ ಪರಿಗಣಿಸಿ, ಮಾನವೀಯ ನೆಲೆಯಲ್ಲಿ ತುರ್ತು ಮತ್ತು ಸಮಯೋಚಿತ ಸಹಾಯ ನೀಡುವಂತೆ ಅಪೇಕ್ಷಿಸುತ್ತೇವೆ ಎಂದಿದ್ದಾರೆ.