ಕೋಲ್ಕತ್ತಾ(ಪಶ್ಚಿಮ ಬಂಗಾಳ) : ಕೋವಿಡ್ ಹಾವಳಿಯಿಂದ ಕಳೆದ ಎರಡು ವರ್ಷಗಳಿಂದ ಸ್ಥಗಿತಗೊಂಡಿದ್ದ ಭಾರತ ಮತ್ತು ಬಾಂಗ್ಲಾದೇಶದ ನಡುವಿನ ರೈಲು ಸೇವೆ ಪುನಾರಂಭಿಸಲಾಗಿದೆ. ಇಂದಿನಿಂದ (ರವಿವಾರ) ಕೋಲ್ಕತ್ತಾ ರೈಲ್ವೆ ನಿಲ್ದಾಣದಲ್ಲಿ ಬಾಂಗ್ಲಾಗೆ 'ಬಂಧನ್ ಎಕ್ಸ್‌ಪ್ರೆಸ್' ಮತ್ತು 'ಮೈತ್ರಿ ಎಕ್ಸ್‌ಪ್ರೆಸ್' ರೈಲ್ವೆಗಳು ಸಂಚಾರ ಆರಂಭಿಸಿವೆ.
ಕೋವಿಡ್ ಕಾರಣದಿಂದ 2020ರ ಮಾರ್ಚ್ನಲ್ಲಿ ಭಾರತ-ಬಾಂಗ್ಲಾ ಪ್ಯಾಸೆಂಜರ್ ರೈಲು ಸೇವೆ ರದ್ದು ಮಾಡಲಾಗಿತ್ತು. ಇದೀಗ ಕೋಲ್ಕತ್ತಾ ಮತ್ತು ಢಾಕಾ ನಡುವೆ ಮೈತ್ರಿ ಎಕ್ಸ್‌ಪ್ರೆಸ್ ಹಾಗೂ ಕೋಲ್ಕತ್ತಾ ಮತ್ತು ಖುಲ್ನಾ ಮಧ್ಯೆ ಬಂಧನ್ ಎಕ್ಸ್‌ಪ್ರೆಸ್ ರೈಲು ಸಂಚರಿಸಲಿದೆ. ಬಂಧನ್ ಎಕ್ಸ್‌ಪ್ರೆಸ್ ವಾರದಲ್ಲಿ ಎರಡು ದಿನ ಸಂಚರಿಸದರೆ, ಮೈತ್ರಿ ಎಕ್ಸ್‌ಪ್ರೆಸ್ ಐದು ದಿನಗಳ ಕಾಲ ಸಂಚರಿಸಲಿದೆ ಎಂದು ಪೂರ್ವ ರೈಲ್ವೆ ವಿಭಾಗದ ವಕ್ತಾರ ಏಕಲವ್ಯ ಚಕ್ರವರ್ತಿ ತಿಳಿಸಿದ್ದಾರೆ.
ರೈಲ್ವೆ ಸಂಚಾರ ಆರಂಭದ ಬಗ್ಗೆ ಎರಡು ರಾಷ್ಟ್ರಗಳ ಗಡಿಯ ಜನರು ಎದುರು ನೋಡುತ್ತಿದ್ದರು. ಈಗಾಗಲೇ ಮುಂದಿನ ಕೆಲವು ದಿನಗಳವರೆಗೆ ರೈಲು ಟಿಕೆಟ್ಗಳು ಬುಕ್ ಆಗಿವೆ. ರೈಲು ಪ್ರಯಾಣದ ಸೌಕರ್ಯ ಮತ್ತು ಅನುಕೂಲಕರ ಸಮಯದ ವೇಳಾಪಟ್ಟಿ ಹಾಗೂ ಕೈಗೆಟುಕುವ ದರ ಟಿಕೆಟ್ ದರ ಇರುವುದರಿಂದ ಜನರು ಬಸ್ ಮತ್ತು ವಿಮಾನಗಳಿಗೆ, ರೈಲಿಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ. ಈ ರೈಲುಗಳು ಸುಮಾರು 450 ಪ್ರಯಾಣಿಕರ ಸಾಮರ್ಥ್ಯ ಹೊಂದಿವೆ. ಎಸಿ ಚೇರ್ಕಾರ್ ಮತ್ತು ಎಕ್ಸಿಕ್ಯೂಟಿವ್ ಕ್ಲಾಸ್ ವಿಭಾಗಗಳೂ ಇದೆ ಎಂದು ಮಾಹಿತಿ ನೀಡಿದರು.
ಜೂನ್ನಲ್ಲಿ ಮತ್ತೊಂದು ರೈಲು : ಪಶ್ಚಿಮ ಬಂಗಾಳ ಮತ್ತು ಬಾಂಗ್ಲಾದೇಶದ ನಡುವೆ ಜೂನ್ 1ರಿಂದ ಮತ್ತೊಂದು ರೈಲು ಸೇವೆ ಆರಂಭವಾಗಿದೆ. ನ್ಯೂ ಜಲ್ಪೈಗುರಿ ಮತ್ತು ಢಾಕಾ ನಡುವೆ 'ಮಿತಾಲಿ ಎಕ್ಸ್‌ಪ್ರೆಸ್' ರೈಲಿಗೆ ಚಾಲನೆ ಸಿಗಲಿದೆ. ಈ ಹೊಸ ರೈಲು ಸೇವೆಯು ಉತ್ತರ ಪಶ್ಚಿಮ ಬಂಗಾಳದಲ್ಲಿ ಪ್ರವಾಸೋದ್ಯಮದ ಉತ್ತೇಜನಕ್ಕೆ ಸಹಕಾರಿಯಾಗಲಿದೆ. ಬಾಂಗ್ಲಾದೇಶದ ಅನೇಕ ಪ್ರಯಾಣಿಕರಿಗೆ ಡಾರ್ಜಿಲಿಂಗ್ ಮತ್ತು ಡೋರ್ಸ್‌ನ ಅರಣ್ಯ ಹಾಗೂ ಟೀ ಎಸ್ಟೇಟ್ಗಳಿಗೆ ಭೇಟಿ ನೀಡಲು ಅನುಕೂಲವಾಗಲಿದೆ ಎಂದೂ ಏಕಲವ್ಯ ಚಕ್ರವರ್ತಿ ತಿಳಿಸಿದ್ದಾರೆ.
ಇದನ್ನೂ ಓದಿ: ಎರಡು ದಿನಗಳ ಹಿಂದೆ ಕಾಣೆಯಾಗಿದ್ದ ಮಹಿಳಾ ನ್ಯಾಯಾಧೀಶೆ ಫ್ಯಾನ್ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ