ನವದೆಹಲಿ: ಭಾರತದ ರಾಷ್ಟ್ರೀಯ ಭದ್ರತೆ, ವಿದೇಶಾಂಗ ಸಂಬಂಧಗಳು ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಸಂಬಂಧಿಸಿದ ತಪ್ಪು ಮಾಹಿತಿಗಳನ್ನು ಹರಡಿದ್ದಕ್ಕಾಗಿ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಐಟಿ ನಿಯಮ 2021 ರ ಅಡಿ ಪಾಕಿಸ್ತಾನ ಮೂಲದ 4 ಯೂಟ್ಯೂಬ್ ಸುದ್ದಿ ಚಾನೆಲ್‌ಗಳು ಸೇರಿದಂತೆ 22 ಯೂಟ್ಯೂಬ್ ಚಾನೆಲ್‌ಗಳನ್ನು ನಿರ್ಬಂಧಿಸಿದೆ ಹಾಗೆ ಮೂರು ಟ್ವಿಟರ್ ಖಾತೆಗಳು, ಒಂದು ಫೇಸ್‌ಬುಕ್ ಖಾತೆ ಮತ್ತು ಒಂದು ಸುದ್ದಿ ವೆಬ್‌ಸೈಟ್ ಅನ್ನು ಸಹ ನಿರ್ಬಂಧಿಸಲಾಗಿದೆ.
ನಿರ್ಬಂಧಿಸಲಾದ ಯೂಟ್ಯೂಬ್ ಚಾನೆಲ್‌ಗಳು ಸೂಕ್ಷ್ಮ ವಿಷಯಗಳ ಕುರಿತು ನಕಲಿ ಸುದ್ದಿ ಮತ್ತು ಸಂಘಟಿತ ತಪ್ಪು ಮಾಹಿತಿಯನ್ನು ಹರಡಲಾಗುತ್ತಿತ್ತು ಎಂದು ಸಚಿವಾಲಯ ಹೇಳಿದೆ. ಕಳೆದ ವರ್ಷ ಫೆಬ್ರವರಿಯಲ್ಲಿ ಐಟಿ ನಿಯಮ 2021 ರ ಅಧಿಸೂಚನೆ ನಂತರ ಭಾರತೀಯ ಯೂಟ್ಯೂಬ್ ಆಧಾರಿತ ಸುದ್ದಿ ಪ್ರಕಾಶಕರ ವಿರುದ್ಧ ಇದೇ ಮೊದಲ ಬಾರಿಗೆ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಸಚಿವಾಲಯದ ಅಧಿಕೃತ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಸಚಿವಾಲಯವು ತನ್ನ ಪತ್ರಿಕಾ ಪ್ರಕಟಣೆಯಲ್ಲಿ, ಚಾನೆಲ್‌ಗಳು ಭಾರತೀಯ ಸಶಸ್ತ್ರ ಪಡೆಗಳು, ಜಮ್ಮು ಮತ್ತು ಕಾಶ್ಮೀರ ಮುಂತಾದ ವಿವಿಧ ವಿಷಯಗಳ ಕುರಿತು ನಕಲಿ ಸುದ್ದಿಗಳನ್ನು ಪೋಸ್ಟ್ ಮಾಡುತ್ತಿವೆ ಎಂದು ಉಲ್ಲೇಖಿಸಿದೆ. ಅವುಗಳಲ್ಲಿ ಕೆಲವು ಭಾರತ ವಿರೋಧಿ ವಿಷಯವನ್ನು ಒಳಗೊಂಡಿದೆ. ಖಾತೆಗಳು ಪಾಕಿಸ್ತಾನದಿಂದ ಸಂಘಟಿತ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿವೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: ಸಂಸದೀಯ ಸಭೆ ನಡೆಸಿದ ಮೋದಿ : ನಾಯಕರಿಗೆ ನೀಡಿದ ಸೂಚನೆಗಳಿವು!
ಈ ಚಾನೆಲ್‌ಗಳು ಪ್ರಕಟಿಸಿದ ವಿಷಯವು ಇತರ ದೇಶಗಳೊಂದಿಗಿನ ಭಾರತದ ವಿದೇಶಿ ಸಂಬಂಧಗಳಿಗೆ ಧಕ್ಕೆ ತರುವ ಗುರಿ ಹೊಂದಿದೆ. ನಿರ್ಬಂಧಿಸಲಾದ ಭಾರತೀಯ ಯೂಟ್ಯೂಬ್ ಚಾನೆಲ್‌ಗಳು ಕೆಲವು ಟಿವಿ ನ್ಯೂಸ್ ಚಾನೆಲ್‌ಗಳ ಟೆಂಪ್ಲೇಟ್‌ಗಳು ಮತ್ತು ಲೋಗೋಗಳನ್ನು ಬಳಸುತ್ತಿದ್ದವು. ಅವುಗಳ ಸುದ್ದಿ ನಿರೂಪಕರ ಚಿತ್ರಗಳನ್ನು ಬಳಕೆ ಮಾಡಿಕೊಳ್ಳುವುದರ ಜೊತೆಗೆ ಸುದ್ದಿಯು ಅಧಿಕೃತ ಎಂದು ಬಿಂಬಿಸಿ ವೀಕ್ಷಕರನ್ನು ತಪ್ಪುದಾರಿಗೆ ಎಳೆಯುತ್ತಿದ್ದವು ಎಂದು ಹೇಳಿದೆ.
ಡಿಸೆಂಬರ್ 2021 ರಿಂದ ರಾಷ್ಟ್ರೀಯ ಭದ್ರತೆ, ಸಾರ್ವಭೌಮತೆ ಮತ್ತು ಭಾರತದ ಸಮಗ್ರತೆ, ಸಾರ್ವಜನಿಕ ಸುವ್ಯವಸ್ಥೆ ಇತ್ಯಾದಿಗಳಿಗೆ ಸಂಬಂಧಿಸಿದ ಆಧಾರದ ಮೇಲೆ 78 ಯೂಟ್ಯೂಬ್ ಆಧಾರಿತ ಸುದ್ದಿ ಚಾನೆಲ್‌ಗಳು ಮತ್ತು ಹಲವಾರು ಇತರ ಸಾಮಾಜಿಕ ಮಾಧ್ಯಮ ಖಾತೆಗಳನ್ನು ನಿರ್ಬಂಧಿಸಲು ನಿರ್ದೇಶನಗಳನ್ನು ನೀಡಿದೆ ಎಂದು ಸಚಿವಾಲಯ ತಿಳಿಸಿದೆ.