ಸತಾರಾ(ಮಹಾರಾಷ್ಟ್ರ): ಸತಾರಾ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಮಹಾಬಲೇಶ್ವರದಲ್ಲಿರುವ ಹೈದರಾಬಾದ್ ನಿಜಾಮರ ಆಸ್ತಿಗಳ ಮೇಲೆ ನಿರ್ಬಂಧ ಹೇರಲಾಗಿದೆ. ಗುತ್ತಿಗೆ ನೀಡಲಾಗಿದ್ದ 15 ಎಕರೆ 15 ಗುಂಟೆ ಪ್ಲಾಟ್ ಮತ್ತು ಅಲ್ಲಿರುವ ಮರದ ಬಂಗಲೆಯ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ. ಇಂದಿನ ಮಾರುಕಟ್ಟೆಯ ಆಧಾರದಲ್ಲಿ ಈ ಆಸ್ತಿಯ ಮೌಲ್ಯ ಸುಮಾರು 250 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ತಹಸೀಲ್ದಾರ್ ಸುಷ್ಮಾ ಚೌಧರಿ ಪಾಟೀಲ್ ನೇತೃತ್ವದ ಅಧಿಕಾರಿಗಳ ತಂಡ ಮುಖ್ಯಬಂಗಲೆ ಹಾಗೂ ಸುತ್ತಮುತ್ತಲಿನ ಕಟ್ಟಡಗಳನ್ನು ಸೀಲ್ ಮಾಡಿದೆ.
ಮಾಜಿ ಮೇಯರ್ ಸ್ವಪ್ನಲಿ ಶಿಂಧೆ ಮತ್ತು ಅವರ ಪತಿ ಮಾಜಿ ಕಾರ್ಪೊರೇಟರ್ ಕುಮಾರ್ ಶಿಂಧೆ ಹಲವು ವರ್ಷಗಳಿಂದ ಮುಖ್ಯ ಬಂಗಲೆ ಬಳಿಯಿರುವ ಸಿಬ್ಬಂದಿ ವಸತಿ ಗೃಹದಲ್ಲಿ ವಾಸವಿದ್ದರು. ಸರ್ಕಾರದ ಆದೇಶದಂತೆ ಶನಿವಾರ ಸಂಜೆಯ ವೇಳೆಗೆ ಬಂಗಲೆಯನ್ನು ಖಾಲಿ ಮಾಡಿದ್ದರು. ನಂತರ ಮುಖ್ಯ ಬಂಗಲೆಯ ಎಲ್ಲಾ ಕೊಠಡಿಗಳು ಮತ್ತು ಎರಡೂ ಗೇಟ್‌ಗಳನ್ನು ತಹಸೀಲ್ದಾರ್ ಸಮ್ಮುಖದಲ್ಲೇ ಸೀಲ್ ಮಾಡಲಾಯಿತು.
ಈ ಆಸ್ತಿಯ ಬಗ್ಗೆ ಠಕ್ಕರ್ ಮತ್ತು ನವಾಬರ ನಡುವೆ ಕಲಹವಿದೆ. ಡಿಸೆಂಬರ್ 1 ರಂದು ಇಬ್ಬರ ನಡುವೆ ಮತ್ತೆ ಸಂಘರ್ಷ ಏರ್ಪಟ್ಟಿದ್ದು ಸತಾರ ಜಿಲ್ಲಾಧಿಕಾರಿ ರುಚೇಶ್ ಜಯವಂಶಿ ಆಸ್ತಿಗೆ ನಿರ್ಬಂಧ ಹೇರಿ ಆದೇಶ ಹೊರಡಿಸಿದ್ದಾರೆ. ಇದಾದ ಬಳಿಕ ಶನಿವಾರ ಸಂಪೂರ್ಣ ಬಂಗಲೆಗೆ ತಹಸೀಲ್ದಾರ್ ಸೀಲ್ ಹಾಕಿದ್ದಾರೆ.
ಬ್ರಿಟೀಷರು ಈ ಆಸ್ತಿಯನ್ನು ಪಾರ್ಸಿ ವಕೀಲರಿಗೆ ಗುತ್ತಿಗೆಗೆ ನೀಡಿದ್ದರಂತೆ. 1952 ರಲ್ಲಿ, ಅಂದರೆ ಸ್ವಾತಂತ್ರ್ಯಾ ನಂತರ ಈ ಭೂಮಿಯನ್ನು ಹೈದರಾಬಾದಿನ ಹಿಸ್ ಹೈನೆಸ್ ನವಾಬ್ ಮಿರ್ಸಾಬ್ ಉಸ್ಮಾನ್ ಅಲ್ಲಿ ಖಾನ್ ಬಹದ್ದೂರ್ ನವಾಬ್ ಅವರಿಗೆ ನೀಡಲಾಗಿದೆ. ಆದರೆ ನವಾಬ್ 59 ಲಕ್ಷದ 47 ಸಾವಿರ ರೂಪಾಯಿ ಆದಾಯ ತೆರಿಗೆ ಬಾಕಿ ಉಳಿಸಿಕೊಂಡಿದ್ದರು. ತೆರಿಗೆ ಕಟ್ಟುವ ತನಕ ಆಸ್ತಿಯನ್ನು ಮಾರಾಟ ಮಾಡುವುದು, ಅಡಮಾನ ಇಡುವುದು ಮತ್ತು ವ್ಯವಹರಿಸುವುದನ್ನು ನಿಷೇಧಿಸಲಾಗಿದೆ.
2016 ರಿಂದ ವಿವಾದ: ನವಾಬ್ ಮೀರ್ ಬರ್ಕತ್ ಅಲಿ ಖಾನ್ ಬಹದ್ದೂರ್ ಹೈದರಾಬಾದ್ ನವಾಬನ ಉತ್ತರಾಧಿಕಾರಿ ಎಂದು ಗುರುತಿಸಲಾಗಿತ್ತು. 2003 ರಲ್ಲಿ ಜಿಲ್ಲಾಧಿಕಾರಿಗಳ ಆದೇಶದಂತೆ ಎಲ್ಲ ಗುತ್ತಿಗೆದಾರರ ಹೆಸರನ್ನು ತೆಗೆದು ಹಾಕಿ ಸರ್ಕಾರಕ್ಕೆ ಠೇವಣಿಯಾಗಿ ಇಡಲಾಗಿತ್ತು. 2005ರಲ್ಲಿ ಆಸ್ತಿ ಮತ್ತೆ ನವಾಬನ ಕೈಸೇರಿತ್ತು. ಆದರೆ, 2016ರ ಆದಾಯ ಹಂಚಿಕೆಯಲ್ಲಿ ಹರ್ಬಲ್ ಹೋಟೆಲ್ ಪ್ರೈ. ಲಿಮಿಟೆಡ್ ನಿರ್ದೇಶಕ ದಿಲೀಪ್ ಠಕ್ಕರ್ ಹೆಸರು ಕೇಳಿಬಂತು. ಅಂದಿನಿಂದ ಆಸ್ತಿಯ ಮೇಲೆ ಠಕ್ಕರ್ ಮತ್ತು ನವಾಬನ ನಡುವಿನ ವಿವಾದ ಆರಂಭವಾಗಿದೆ. ಶನಿವಾರ ಜಿಲ್ಲಾಧಿಕಾರಿ ಆದೇಶದಂತೆ ಆಸ್ತಿಯ ಮೇಲೆ ನಿರ್ಬಂಧ ಹೇರಲಾಗಿದೆ.
ಇದನ್ನೂ ಓದಿ: ದೊಡ್ಡಬಳ್ಳಾಪುರ: 25ಕ್ಕೂ ಹೆಚ್ಚು ಅಡಿಕೆ ಮರ ಕಡಿದು ಹಾಕಿದ ದುಷ್ಕರ್ಮಿಗಳು