ಹೈದರಾಬಾದ್ (ತೆಲಂಗಾಣ): ಮಹಾನಗರದ ಸೈಬರಾಬಾದ್ ಪೊಲೀಸ್ ಇಲಾಖೆ, ಸೊಸೈಟಿ ಫಾರ್ ಸೈಬರಾಬಾದ್ ಸೆಕ್ಯೂರಿಟಿ ಕೌನ್ಸಿಲ್ ಹಾಗೂ ಮೆಡಿಕೊವರ್ ಹಾಸ್ಪಿಟಲ್ ಇವುಗಳ ಜಂಟಿ ಸಹಯೋಗದಲ್ಲಿ ಹೈಟೆಕ್ಸ್ ಎಕ್ಸಿಬಿಷನ್ ಸೆಂಟರ್ನಲ್ಲಿ ಭಾನುವಾರ ಬೃಹತ್ ಕೋವಿಡ್ ವ್ಯಾಕ್ಸಿನೇಶನ್ ಮೇಳ ಆಯೋಜಿಸಲಾಗಿತ್ತು.
ಈ ಮೇಳದಲ್ಲಿ ಭಾನುವಾರ ಮಧ್ಯಾಹ್ನದ ಹೊತ್ತಿಗೆ ಸುಮಾರು 40 ಸಾವಿರ ಜನ ವ್ಯಾಕ್ಸಿನ್ ಪಡೆಯಲು ಹೆಸರು ನೋಂದಾಯಿಸಿಕೊಂಡಿದ್ದರು. ಬೆಳಗ್ಗೆ 8 ಗಂಟೆಗೆ ಆರಂಭವಾದ ಮೇಳ ರಾತ್ರಿ 9ರವರೆಗೂ ನಡೆಯಿತು.
ಈ ಕುರಿತು ಮಾತನಾಡಿದ ಸೈಬರಾಬಾದ್ ಪೊಲೀಸ್ ಆಯುಕ್ತ ವಿ ಸಿ ಸಜ್ಜನರ, ಹೆಚ್ಚೆಚ್ಚು ಜನರಿಗೆ ವ್ಯಾಕ್ಸಿನ್ ನೀಡಲು ಈ ಮೇಳ ಆಯೋಜಿಸಲಾಗಿದೆ. ಮತ್ತಷ್ಟು ಖಾಸಗಿ ಆಸ್ಪತ್ರೆಗಳು ಇಂಥ ಮೇಳಗಳನ್ನು ಆಯೋಜಿಸಿ ಜನರಿಗೆ ವ್ಯಾಕ್ಸಿನ್ ನೀಡಬೇಕು ಎಂದು ಕರೆ ನೀಡಿದರು.
ಈ ಮೇಳದ ವೈದ್ಯಕೀಯ ಉಸ್ತುವಾರಿಯನ್ನು ಮೆಡಿಕೊವರ್ ಹಾಸ್ಪಿಟಲ್ ವಹಿಸಿಕೊಂಡಿತ್ತು. ಈ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿ ವ್ಯಾಕ್ಸಿನ್ ನೀಡುವಲ್ಲಿ ಶ್ರಮ ವಹಿಸಿದರು. ಮೊದಲೇ ನೋಂದಾಯಿಸಿಕೊಳ್ಳುವುದು ಹಾಗೂ ಮುಂಗಡವಾಗಿ ಪಾವತಿಸುವ ಆಧಾರದಲ್ಲಿ ಮೇಳ ಜರುಗಿಸಲಾಯಿತು. ಪ್ರತಿಯೊಬ್ಬರಿಗೆ ವ್ಯಾಕ್ಸಿನ್ ಪಡೆಯಲು 1400 ರೂಪಾಯಿ ಶುಲ್ಕ ನಿಗದಿಪಡಿಸಲಾಗಿತ್ತು.
ಇಲ್ಲಿ ವ್ಯಾಕ್ಸಿನ್ ಶುಲ್ಕ 1250 ರೂ. ಹಾಗೂ ನಿರ್ವಹಣಾ ಶುಲ್ಕ 150 ರೂ.ಗಳಾಗಿದೆ ಎಂದು ಮೆಡಿಕೊವರ್ ಆಸ್ಪತ್ರೆಯ ಆಡಳಿತಾಧಿಕಾರಿ ಹರಿ ಕೃಷ್ಣ ತಿಳಿಸಿದರು.