ಹೈದರಾಬಾದ್(ತೆಲಂಗಾಣ) : ಚಾಲನಾ ಪರವಾನಿಗೆ ಪಡೆಯಲು ಎಷ್ಟೆಲ್ಲಾ ನಿಮಯಗಳಿವೆ. ಇಷ್ಟು ಎತ್ತರ, ಇಷ್ಟು ವಯಸ್ಸು.. ಈ ಎಲ್ಲಾ ನಿಯಮಗಳನ್ನು ಪಾಲಿಸಿದರೂ ಪರವಾನಿಗೆ ಸಿಗುವುದು ಕಷ್ಟವಿರುವಾಗ ಇಲ್ಲೊಬ್ಬ 3 ಅಡಿಯ ಕುಬ್ಜ ವ್ಯಕ್ತಿ ಚಾಲನಾ ಪರವಾನಿಗೆ ಪಡೆದಿರೋದು ಎಲ್ಲರ ಅಚ್ಚರಿಗೆ ಕಾರಣವಾಗಿದ್ದಾರೆ.
ಹೈದರಾಬಾದ್ ಮೂಲದ ಗಟ್ಟಿಪಲ್ಲಿ ಶಿವಪಾಲ್ ಎಂಬ ವ್ಯಕ್ತಿ ಕೇವಲ 3 ಅಡಿ ಎತ್ತರವಿದ್ದರೂ ಚಾಲನಾ ಪರವಾನಿಗೆ(Driving license) ಪಡೆದಿದ್ದಾರೆ. ಈ ಮೂಲಕ ಲೈಸೆನ್ಸ್ ಪಡೆದ ದೇಶದ ಮೊದಲ ಕುಬ್ಜ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಹೈದರಾಬಾದ್ನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿರುವ ಶಿವಪಾಲ್ ಕುಬ್ಜರಾಗಿದ್ದರೂ ತಮ್ಮ ಕಾರನ್ನು ತಾವೇ ಚಲಾಯಿಸುತ್ತಾರೆ. ಅದಕ್ಕೆ ಸರ್ಕಾರ ಪರವಾನಿಗೆ ಕೂಡ ನೀಡಿದೆ.
ಶಿವಪಾಲ್ ಕಾರು ಓಡಿಸಲು ಕಲಿತ್ತಿದ್ಹೇಗೆ?: 'ಜನರು ನನ್ನ ಎತ್ತರದ ಬಗ್ಗೆ ವ್ಯಂಗ್ಯವಾಡುತ್ತಿದ್ದರು. ನನ್ನ ಹೆಂಡತಿ ಜೊತೆ ಹೊರಗೆ ಹೋದಾಗ ಕೆಟ್ಟದಾಗಿ ಮಾತನಾಡುತ್ತಿದ್ದರು. ಇದರಿಂದ ನೋವಾಗಿ ಸ್ವತಃ ಕಾರು ತೆಗೆದುಕೊಳ್ಳಲು ನಿರ್ಧರಿಸಿದೆ.
ಕುಬ್ಜರು ಕಾರು ಚಲಾಯಿಸುವುದು ಹೇಗೆಂದು ಅಂತರ್ಜಾಲದಲ್ಲಿನ ವಿಡಿಯೋಗಳನ್ನು ನೋಡಿದೆ. ನನ್ನ ಎತ್ತರಕ್ಕೆ ತಕ್ಕಂತೆ ಕಾರಿನ ಭಾಗಗಳನ್ನು ಮಾರ್ಪಡಿಸಿಕೊಂಡೆ. ಬಳಿಕ ಸ್ನೇಹಿತನ ಸಹಾಯದಿಂದ ಕಾರು ಚಲಾಯಿಸಲು ಕಲಿತುಕೊಂಡೆ ಎಂದು ಶಿವಪಾಲ್ ತಿಳಿಸಿದ್ದಾರೆ.
ಇದನ್ನೂ ಓದಿ: ಅಯ್ಯೋ ದೇವರೇ.. ಚಿತ್ತೂರಿನಲ್ಲಿ ಹೊತ್ತಿ ಉರಿದ ಕಾರು.. ಮಗು ಸೇರಿ ಐವರ ದುರ್ಮರಣ..
ಚಾಲನಾ ಪರವಾನಿಗೆಗಾಗಿ ಸಾರಿಗೆ ಇಲಾಖೆಗೆ ಅರ್ಜಿ ಹಾಕಿ, ಅಧಿಕಾರಿಗಳ ಸಮ್ಮುಖದಲ್ಲೇ ಕಾರು ಚಲಾಯಿಸಿದೆ. ಬಳಿಕ 3 ತಿಂಗಳ ಕಲಿಕಾ ಪರವಾನಿಗೆ ಪಡೆದುಕೊಂಡೆ. ಈಗ ಚಾಲನಾ ಪರವಾನಿಗೆ ಗಿಟ್ಟಿಸಿಕೊಂಡಿದ್ದೇನೆ ಎಂದು ಶಿವಪಾಲ್ ಎಎನ್ಐಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಇಷ್ಟಲ್ಲದೇ ಶಿವಪಾಲ್ ಲಿಮ್ಕಾ ಬುಕ್ ಆಫ್ ರೆಕಾರ್ಡ್ಗೆ ನಾಮಿ ನಿರ್ದೇಶನಗೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಕುಬ್ಜರಿಗಾಗಿ ಡ್ರೈವಿಂಗ್ ಶಾಲೆಯನ್ನು ತೆರೆಯಲು ಉದ್ದೇಶಿಸಿದ್ದಾರೆ. ಇನ್ನೊಂದು ವಿಶೇಷವೆಂದರೆ ಶಿವಪಾಲ್ ಕರೀಂನಗರ ಜಿಲ್ಲೆಯಲ್ಲಿ ಪದವಿ ಪಡೆದ ಮೊದಲ ಕುಬ್ಜ ಪದವೀಧರರಾಗಿದ್ದಾರೆ.