ರುದ್ರಾಪುರ: ವರದಕ್ಷಿಣೆ ನೀಡಲ್ಲವೆಂದು ಮದುವೆಯಾಗಿ ಕೇವಲ 12 ಗಂಟೆಗಳಲ್ಲೇ ಪತ್ನಿಗೆ ಪತಿಯೊಬ್ಬ ತ್ರಿವಳಿ ತಲಾಖ್ ನೀಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ನವೆಂಬರ್ 28ರಂದು ಕಿಚ್ಚ ದರಾವು ನಿವಾಸಿ ನಿಮ್ರಾ ಖಾನ್ ಜೊತೆ ಬಿಲಾಸ್‌ಪುರದ ಚಾವೇಜ್ ಖಾನ್ ವಿವಾಹವಾಗಿದ್ದರು. ಮದುವೆಯ ದಿನ ಸಂಜೆ ಗಂಡನ ಮನೆಯಲ್ಲಿ ನಿಮ್ರಾಳನ್ನು ನೆಲದ ಮೇಲೆ ಕೂರಿಸಿ ವರದಕ್ಷಿಣೆ ವಿಷಯ ಪ್ರಸ್ತಾಪಿಸಿ ಅವಮಾನಿಸಿದ್ದಾರೆ. ಈ ವೇಳೆ, ಸದ್ಯಕ್ಕೆ ನಮ್ಮ ತಂದೆ ವರದಕ್ಷಿಣೆ ಕೊಡುವ ಸ್ಥಿತಿಯಲ್ಲಿಲ್ಲ ಎಂದು ಹೇಳಿದ್ದಾಳೆ. ಇದರಿಂದ ಕುಪಿತಗೊಂಡ ಗಂಡನ ಮನೆಯವರು ನಿಮ್ರಾಳ ಮೇಲೆ ಹಲ್ಲೆ ಮಾಡಿದ್ದಾರೆ.
ಮರುದಿನ ಬೆಳಗ್ಗೆ ನಿಮ್ರಾ ಸಹೋದರರು ಚಾವೇಜ್ ಖಾನ್ ಮನೆಗೆ ತೆರಳಿದ್ದಾರೆ. ಈ ವೇಳೆ ಚಾವೇಜ್ ಹೆಂಡ್ತಿಯ ಸಹೋದರರ ಮುಂದೆಯೇ ಮೂರು ಬಾರಿ ತಲಾಖ್ ಘೋಷಿಸಿದ್ದಾನೆ. ಬಳಿಕ ಸಹೋದರರು ನಿಮ್ರಾಳನ್ನು ತಮ್ಮ ಮನೆಗೆ ಕರೆದೊಯ್ದರು. ಬಳಿಕ ನಿಮ್ರಾ ತನಗೆ ಫೋನ್ನಲ್ಲಿ ಕಿರುಕುಳ ನೀಡಿದ ಆರೋಪದ ಮೇಲೆ ಪತಿ ಸೇರಿದಂತೆ 8 ಜನರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ.
ದೇಶದಲ್ಲಿ ತ್ರಿವಳಿ ತಲಾಖ್ ನಿಷೇಧಿಸುವ ಕಾನೂನು 2019ರಲ್ಲಿ ಜಾರಿಗೆ ಬಂದಿದೆ. ವಿವಾಹದ ಹಕ್ಕು ರಕ್ಷಣೆ ಕಾಯ್ದೆ ಪ್ರಕಾರ, ತ್ರಿವಳಿ ತಲಾಖ್ ನೀಡುವುದು ಶಿಕ್ಷಾರ್ಹ ಅಪರಾಧ. ತ್ರಿವಳಿ ತಲಾಖ್ ನೀಡಿದ ವ್ಯಕ್ತಿಗೆ ಮೂರು ವರ್ಷ ಜೈಲು ಶಿಕ್ಷೆ ನೀಡುವ ಅವಕಾಶ ಕಾನೂನಿನಲ್ಲಿದೆ.