ಬರೇಲಿ(ಉತ್ತರಪ್ರದೇಶ): ದೇಶಾದ್ಯಂತ ತ್ರಿವಳಿ ತಲಾಖ್(Triple Talaq) ನಿಷೇಧ ಮಾಡಿ ಮೋದಿ ಸರ್ಕಾರ ಈಗಾಗಲೇ ಆದೇಶ ಹೊರಡಿಸಿದೆ. ಇದರ ಮಧ್ಯೆ ಕೆಲವೊಂದು ಇಂತಹ ಪ್ರಕರಣ ಕಾಣಿಸಿಕೊಳ್ತಿವೆ. ಅದೇ ರೀತಿಯ ಘಟನೆವೊಂದು ಉತ್ತರಪ್ರದೇಶದಲ್ಲಿ ನಡೆದಿದೆ.
ಕಟ್ಟಿಕೊಂಡ ಹೆಂಡತಿ ಮೈಬಣ್ಣ ಕಪ್ಪು(dark complexion) ಎಂಬ ಕಾರಣಕ್ಕಾಗಿ ಗಂಡನೋರ್ವ ತಲಾಖ್(Triple Talaq case in Bareilly) ನೀಡಿರುವ ಘಟನೆ ಉತ್ತರಪ್ರದೇಶದ ಬರೇಲಿಯಲ್ಲಿ ನಡೆದಿದೆ. ಇದಕ್ಕೆ ಸಂಬಂಧಿಸಿದಂತೆ ಮಹಿಳೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಕಟ್ಟಿಕೊಂಡ ಹೆಂಡತಿಯ ಮೈಬಣ್ಣ ಕಪ್ಪು ಇದೆ ಎಂದು ಆರೋಪಿಸಿರುವ ಗಂಡ, ಆಕೆಗೆ ತಲಾಖ್ ನೀಡಿದ್ದಾನೆ. ಇದೇ ಕಾರಣಕ್ಕಾಗಿ ಮಹಿಳೆಯ ಗಂಡ ಸೇರಿದಂತೆ 8 ಮಂದಿಯ ವಿರುದ್ಧ ಪೊಲೀಸ್ ಠಾಣೆಯಲ್ಲಿ ವರದಕ್ಷಿಣೆ(Dowry Prohibition case) ಹಾಗೂ ಮುಸ್ಲಿಂ ವಿವಾಹ ಹಕ್ಕುಗಳ ರಕ್ಷಣೆ ಕಾಯ್ದೆ ಅಡಿ ದೂರು ದಾಖಲು ಮಾಡಿದ್ದಾಳೆ. ಕಳೆದ 9 ತಿಂಗಳ ಹಿಂದೆ ಆಲಂ ಎಂಬ ವ್ಯಕ್ತಿ ಯುವತಿ ಜೊತೆ ಮದುವೆ ಮಾಡಿಕೊಂಡಿದ್ದ ಎಂದು ವರದಿಯಾಗಿದೆ.
ಮದುವೆ ಮಾಡಿಕೊಂಡ ನಂತರ ಗಂಡ, ಅತ್ತಿಗೆ ಸೇರಿದಂತೆ ಕುಟುಂಬಸ್ಥರು ಮಹಿಳೆಯ ಮೈಬಣ್ಣ ಹಾಗೂ ವರದಕ್ಷಿಣೆ ವಿಚಾರವಾಗಿ ಕೀಳು ಮಟ್ಟದಲ್ಲಿ ಮಾತನಾಡ್ತಿದ್ದರಂತೆ. ಇದರ ಜೊತೆಗೆ ತವರು ಮನೆಯಿಂದ ಮತ್ತಷ್ಟು ವರದಕ್ಷಿಣೆ ತೆಗೆದುಕೊಂಡು ಬರುವಂತೆ ಚಿತ್ರಹಿಂಸೆ ನೀಡುತ್ತಿದ್ದರು ಎಂಬ ಆರೋಪ ಕೇಳಿ ಬಂದಿದೆ.
ಮದುವೆ ಸಂದರ್ಭದಲ್ಲಿ ಯುವತಿಯ ತಂದೆ ಗಂಡನ ಮನೆಯವರಿಗೆ 10 ಗುಂಟೆ ಜಮೀನು ನೀಡಿದ್ದರಂತೆ. ಇದರ ಹೊರತಾಗಿ ಕೂಡ ಕಾರು ಖರೀದಿ ಮಾಡಲು 10 ಲಕ್ಷ ರೂ. ತೆಗೆದುಕೊಂಡು ಬರುವಂತೆ ಒತ್ತಾಯಿಸಿದ್ದರಂತೆ. ಇದಕ್ಕೆ ನಿರಾಕರಣೆ ಮಾಡಿದಾಗ ಯುವತಿ ಮೇಲೆ ಗಂಡನ ಮನೆಯವರು ದೈಹಿಕವಾಗಿ ಕಿರುಕುಳ ನೀಡಿದ್ದಾರೆ. ಜೊತೆಗೆ ತಲಾಖ್ ನೀಡಿ ಮನೆಯಿಂದ ಹೊರ ಹಾಕಿದ್ದಾರೆ. ಇದೇ ವಿಚಾರವಾಗಿ ಆಕೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ.
ಇದನ್ನೂ ಓದಿರಿ: ಇನ್ನೂ 5 ದಿನ ಭಾರಿ ಮಳೆ: ನದಿ ಪಾತ್ರದ ಜನರಿಗೆ ಸುರಕ್ಷಿತ ಸ್ಥಳಕ್ಕೆ ತೆರಳಲು ಬೆಳಗಾವಿ ಡಿಸಿ ಸೂಚನೆ
ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ಸ್ಪೆಕ್ಟರ್ ರಾಜೀವ್ ಸಿಂಗ್(Inspector Rajeev Singh) ಮಾತನಾಡಿದ್ದು, ಮಹಿಳೆ ನೀಡಿರುವ ದೂರಿನನ್ವಯ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ. ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.