ಹೌರಾ (ಪಶ್ಚಿಮ ಬಂಗಾಳ): ಕೆಲವು ದಿನಗಳ ಹಿಂದೆ ಬುರ್ದ್ವಾನ್‌ನಲ್ಲಿ ಮದ್ಯ ದುರಂತ ನಡೆದಿತ್ತು. ಇದೀಗ ಹೌರಾದಲ್ಲಿ ಇದೇ ರೀತಿಯ ಘಟನೆ ನಡೆದಿದೆ. ನಕಲಿ ಮದ್ಯ ಸೇವಿಸಿ 9 ಜನರು ಮೃತಪಟ್ಟಿದ್ದು, ಈ ಘಟನೆ ಹೌರಾದ ಘುಸುರಿಯ ಮಾಲಿ ಪಂಚ್ಘರಾ ಪೊಲೀಸ್ ಠಾಣೆ ವ್ಯಾಪ್ತಿಯ ಗಜಾನಂದ ಬಸ್ತಿಯಲ್ಲಿ ನಡೆದಿದೆ.
ಮೂಲಗಳ ಪ್ರಕಾರ, ಆ ಪ್ರದೇಶದಲ್ಲಿ ನಕಲಿ ಮದ್ಯ ಸೇವಿಸಿ ಹಲವಾರು ಜನರು ಮೃತಪಟ್ಟರೇ, ಅಸ್ವಸ್ಥಗೊಂಡಿದ್ದಾರೆ. ಇದೇ ವೇಳೆ, ಪೊಲೀಸರು ಹಾಗೂ ಆಡಳಿತ ಮಂಡಳಿಗೆ ತಿಳಿಯದಂತೆ ಕೆಲವರ ಶವಗಳನ್ನು ಸುಟ್ಟು ಹಾಕಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಮದ್ಯ ಸೇವಿಸಿ ಹಲವರು ಅಸ್ವಸ್ಥರಾಗಿದ್ದಾರೆ ಎಂದು ಸ್ಥಳೀಯ ಮೂಲಗಳು ತಿಳಿಸಿವೆ. ಕೆಲವರು ಮನೆಯಲ್ಲಿದ್ದರೂ ಹೆಚ್ಚಿನವರು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಮಾಲಿಪಂಚ್‌ಘರಾ ಪೊಲೀಸ್ ಠಾಣೆಯ ಹಿಂಭಾಗದಲ್ಲಿ ಪ್ರತಾಪ್ ಕರ್ಮಾಕರ್ ಎಂಬ ವ್ಯಕ್ತಿ ಅಕ್ರಮವಾಗಿ ಮದ್ಯ ಮಾಡುತ್ತಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಸ್ಥಳೀಯ ಕಾರ್ಖಾನೆಗಳ ಕಾರ್ಮಿಕರು ನಿತ್ಯ ಅಲ್ಲಿಗೆ ಹೋಗುತ್ತಿದ್ದರು ಎಂದು ವರದಿಯಾಗಿದೆ. ಕೊಳೆಗೇರಿಗಳಲ್ಲಿ ವಾಸಿಸುವ ಕಾರ್ಮಿಕರು ಘಟನೆಯ ದಿನ ಅಲ್ಲಿ ಮದ್ಯ ಸೇವಿಸಿದ್ದಾರೆ.
ಇದನ್ನೂ ಓದಿ: ಕಂಪೌಂಡ್ ವಿವಾದ.. ಮಹಿಳೆಯಿಂದಲೇ ಮಹಿಳೆಯ ಮೇಲೆ ಆ್ಯಸಿಡ್ ದಾಳಿ
ಕೆಲವರ ಕುಟುಂಬದವರು ಪೊಲೀಸರಿಗೆ ಮಾಹಿತಿ ನೀಡದೆ ಶವಗಳನ್ನು ಸುಟ್ಟು ಹಾಕಿದ್ದಾರೆ ಎಂಬ ಆರೋಪವೂ ಕೇಳಿ ಬಂದಿದೆ. ಘಟನೆಯ ಕುರಿತು ಹೌರಾ ಕಮಿಷನರೇಟ್ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ. ಇಡೀ ವಿಷಯವನ್ನು ಗಂಭೀರವಾಗಿ ಪರಿಗಣಿಸಲಾಗುತ್ತಿದೆ. ಈ ಘಟನೆಯಲ್ಲಿ ಭಾಗಿಯಾಗಿರುವ ಯಾರನ್ನೂ ಬಿಡಲಾಗುವುದಿಲ್ಲ ಎಂದು ಹೌರಾ ನಗರ ಪೊಲೀಸ್ ಮೂಲಗಳು ತಿಳಿಸಿವೆ.