ಇತ್ತೀಚಿನ ದಿನಗಳಲ್ಲಿ ಬೆಂಗಳೂರು ಸೇರಿದಂತೆ ದೇಶದ ಹಲವಾರು ಮಹಾನಗರಗಳಲ್ಲಿ ಮಳೆಯಿಂದಾಗುವ ಅವಾಂತರಗಳು ಹೆಚ್ಚಾಗುತ್ತಿವೆ. ಬಿಟ್ಟೂ ಬಿಡದೆ ಸುರಿಯುವ ಮಳೆಯಿಂದ ಜನ ಕಂಗಾಲಾಗುವಂತಾಗಿದೆ. ಕೆಲ ಪ್ರದೇಶಗಳಲ್ಲಿನ ಮನೆಗಳು ಹಾಗೂ ಅಪಾರ್ಟ್ಮೆಂಟ್ಗಳಲ್ಲಿ ನೀರು ನುಗ್ಗಿ ಮನೆ ಮುಂದೆ ನಿಲ್ಲಿಸಿದ ವಾಹನಗಳು ಸಂಪೂರ್ಣ ನೀರಲ್ಲಿ ಮುಳುಗುತ್ತಿವೆ. ಇನ್ನು ಕೆಲ ಬಾರಿ ರಸ್ತೆಯಲ್ಲಿ ನಿಲ್ಲಿಸಿದ ವಾಹನಗಳು ನೀರಿನ ಪ್ರವಾಹಕ್ಕೆ ಕೊಚ್ಚಿ ಹೋಗುವುದೂ ಉಂಟು. ಇಂಥ ಸಂದರ್ಭದಲ್ಲಿ ಮಳೆ ನೀರಿನಿಂದ ನಿಮ್ಮ ಬೈಕ್ ಹಾಗೂ ಕಾರುಗಳನ್ನು ಹೇಗೆ ರಕ್ಷಿಸಿಕೊಳ್ಳಬಹುದು ಎಂಬ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.
ಮಳೆಗಾಲದಲ್ಲಿ ಬೈಕ್ ನಿರ್ವಹಣೆ ಟಿಪ್ಸ್ ಇಲ್ಲಿವೆ.
ಬೈಕ್ ಮಳೆಯಲ್ಲಿ ನೆನೆದರೆ ಓಕೆನಾ? ನಿಮ್ಮ ದ್ವಿಚಕ್ರ ವಾಹನವನ್ನು ನಿಯಮಿತವಾಗಿ ಪಾಲಿಷ್ ಮಾಡಿಸಿ ಉತ್ತಮ ಸ್ಥಿತಿಯಲ್ಲಿ ಇಟ್ಟಿದ್ದರೆ, ಬೈಕ್ ವಾರಗಟ್ಟಲೆ ಮಳೆಯಲ್ಲಿ ಒದ್ದೆಯಾದರೂ ಅದರಿಂದ ಅಂಥ ಸಮಸ್ಯೆಯೇನೂ ಆಗದು. ಆದರೆ ಈ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದಿದ್ದಲ್ಲಿ ಮಾತ್ರ ಸಮಸ್ಯೆಯಾಗಬಹುದು.
ಮಾನ್ಸೂನ್ ಆರಂಭಕ್ಕೂ ವಾಹನಕ್ಕೆ ಮುನ್ನ ಯಾವೆಲ್ಲ ಮುಂಜಾಗ್ರತಾ ಪರೀಕ್ಷೆಗಳನ್ನು ಮಾಡಿಸಬೇಕು?
- ಹಳೆಯ / ಸವೆದ ಟೈರ್ಗಳನ್ನು ಬದಲಾಯಿಸಿ
- ಅಗತ್ಯವಿದ್ದರೆ ಬ್ರೇಕ್ ಪ್ಯಾಡ್ಗಳನ್ನು ಬದಲಾಯಿಸಿ
- ಹೆಡ್ಲೈಟ್ ಅನ್ನು ಪರಿಶೀಲಿಸಿ
- ಸೀಟ್ ಪ್ಯಾಡ್ಗಳಲ್ಲಿ ಬಿರುಕುಗಳಿದ್ದರೆ ಮಳೆಯಲ್ಲಿ ಸೀಟ್ ಹಾಳಾಗಿದೆಯೇ ಎಂದು ಪರಿಶೀಲಿಸಿ
- ಇಂಡಿಕೇಟರ್ ಪರಿಶೀಲಿಸಿ
- ಬ್ರೇಕ್ ಲೈಟ್ ಕೆಲಸ ಮಾಡುತ್ತಿದೆಯಾ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸಿ
ನಿಯಮಿತವಾಗಿ ಬೈಕ್ ಸರ್ವಿಸ್ ಮಾಡಿಸಿ: ನೀವು ಕಾಲಕಾಲಕ್ಕೆ ನಿಮ್ಮ ಬೈಕ್ನ ಸರ್ವಿಸಿಂಗ್ ಮಾಡಿಸಲು ಆದ್ಯತೆ ನೀಡಬೇಕು. ಬೈಕ್ನ ವಿವಿಧ ಭಾಗಗಳಲ್ಲಿ ಸಂಗ್ರಹವಾಗುವ ಧೂಳಿನ ಕಣಗಳು, ನೀರಿನ ಹನಿಗಳು ಬೈಕ್ ಅನ್ನು ಸಂಪೂರ್ಣವಾಗಿ ಹಾನಿಗೊಳಿಸುತ್ತವೆ. ವಿಶೇಷವಾಗಿ ಮಳೆಗಾಲದ ಮೊದಲು ಬೈಕ್ಗೆ ಯಾವುದೇ ರೀತಿಯ ಹಾನಿಯಾಗಿದೆಯೇ ಎಂಬುದನ್ನು ತಿಳಿಯಲು ನಿಮ್ಮ ಬೈಕ್ ಅನ್ನು ಒಮ್ಮೆ ಸರ್ವಿಸ್ ಮಾಡಿಸುವುದು ಬಹಳ ಮುಖ್ಯ. ಉತ್ತಮ ಗ್ರಿಪ್ಗಾಗಿ ಟೈರ್ಗಳು 3 ಮಿಲಿಮೀಟರ್ ಆಳದ ಗ್ರಿಪ್ ಹೊಂದಿರಬೇಕು. ಗ್ರಿಪ್ ಚೆನ್ನಾಗಿರಲು ಟೈರ್ಗಳಲ್ಲಿ ಗಾಳಿಯ ಒತ್ತಡವನ್ನು ಒಂಚೂರು ಕಡಿಮೆ ಇಟ್ಟುಕೊಳ್ಳುವುದು ಸೂಕ್ತ.
ನಿಮ್ಮ ಬೈಕ್ನ ಚೈನ್ ಆಯ್ಲಿಂಗ್ ಮಾಡಿಸಿ: ತೇವದ ವಾತಾವರಣದಲ್ಲಿ ಬೈಕ್ ಚೈನ್ಗಳ ಮೇಲಿನ ಗ್ರೀಸ್ ತೊಳೆದುಹೋಗುತ್ತದೆ. ಇದರಿಂದ ಚೈನ್ ತುಕ್ಕು ಹಿಡಿದಂತಾಗಿ ಅದರ ಕಾರ್ಯಕ್ಷಮತೆಯನ್ನು ಕಡಿಮೆಯಾಗುತ್ತದೆ. ಲಿವರ್ಗಳು ಮತ್ತು ಹಿಂಜ್ಗಳನ್ನು ಸಹ ಗ್ರೀಸಿಂಗ್ ಮಾಡಿಸುವುದು ಅಗತ್ಯ.
ಏರ್ ಫಿಲ್ಟರ್ ಅನ್ನು ಸ್ವಚ್ಛವಾಗಿಡಿ: ಮಳೆಗಾಲದಲ್ಲಿ ತೇವಾಂಶ ಹೆಚ್ಚಾಗಿರುವುದರಿಂದ ಬೈಕಿನ ಏರ್ ಫಿಲ್ಟರ್ನಲ್ಲಿ ಅಡಚಣೆಯಾಗಿ ಗಾಳಿಯು ಸಲೀಸಾಗಿ ಹಾದುಹೋಗದಂತೆ ನಿರ್ಬಂಧಿಸುತ್ತದೆ. ಹೀಗಾಗಿ ಏರ್ ಫಿಲ್ಟರ್ ಅನ್ನು ನಿಯಮಿತವಾಗಿ ಕ್ಲೀನ್ ಮಾಡಿಸಿ.
ಟೆಫ್ಲಾನ್ ಕೋಟಿಂಗ್ ಮಾಡಿಸಿ: ಟೆಫ್ಲಾನ್ ಕೋಟಿಂಗ್ ಬಗ್ಗೆ ಬಹಳಷ್ಟು ಜನರಿಗೆ ತಿಳಿದಿಲ್ಲ. ಮಳೆಗಾಲ ಆರಂಭಕ್ಕೆ ಮುಂಚೆ ನಿಮ್ಮ ಬೈಕನ್ನು ಸಂಪೂರ್ಣವಾಗಿ ಟೆಫ್ಲಾನ್ ಕೋಟಿಂಗ್ ಮಾಡಿಸುವುದು ತುಂಬಾ ಅಗತ್ಯವಾಗಿದೆ. ಟೆಫ್ಲಾನ್ ಕೋಟಿಂಗ್ ಮಾಡಿಸಿದ್ದಲ್ಲಿ ಮಳೆಹನಿಗಳು ಬೈಕ್ ಮೇಲ್ಮೈ ಮೇಲೆ ನಿಲ್ಲದೆ ಜಾರಿ ಹೋಗುತ್ತವೆ ಮತ್ತು ನೀರಿನಿಂದ ಬೈಕ್ನ ಯಾವುದೇ ಭಾಗಕ್ಕೂ ತುಕ್ಕು ಹಿಡಿಯುವುದಿಲ್ಲ. ಟೆಫ್ಲಾನ್ ಕೋಟಿಂಗ್ ತುಂಬಾ ಅಗ್ಗವಾಗಿದ್ದು, ಯಾವುದೇ ಸರ್ವಿಸ್ ಸೆಂಟರ್ನಲ್ಲಿ ಮಾಡಿಸಬಹುದು.
ಬೈಕ್ ಲೈಟ್ಗಳು ಪ್ರಕಾಶಮಾನವಾಗಿರಬೇಕು: ಮಳೆಗಾಲದಲ್ಲಿ ರಾತ್ರಿ ದಾರಿ ಕಾಣದಿರುವ ಸಮಸ್ಯೆ ಎದುರಾಗುವುದು ಸಹಜ. ಹೀಗಾಗಿ ನಿಮ್ಮ ಹೆಡ್ಲೈಟ್ ಮತ್ತು ಟೇಲ್ ಲೈಟ್ ಸುಸ್ಥಿತಿಯಲ್ಲಿವೆಯಾ ಎಂಬುದನ್ನು ಪರಿಶೀಲಿಸಿ. ಲೈಟ್ಗಳು ಸಾಕಷ್ಟು ಪ್ರಕಾಶಮಾನವಾಗಿ ಬೆಳಗುತ್ತಿದ್ದರೆ ಮಾತ್ರ ಮಳೆಯಲ್ಲಿ ರಸ್ತೆ ಕಾಣಿಸುತ್ತದೆ. ಅಲ್ಲದೆ ಪ್ರಕಾಶಮಾನವಾದ ಬಟ್ಟೆಗಳನ್ನು ಧರಿಸುವುದರಿಂದ ಎದುರಿನ ವಾಹನಗಳಿಗೆ ನೀವು ಸುಲಭವಾಗಿ ಕಾಣಿಸುವಂತೆ ಮಾಡಬಹುದು.
ಛಾವಣಿಯ ಕೆಳಗೆ ಬೈಕ್ ನಿಲ್ಲಿಸಿ: ಮಳೆ ನೀರು ತಾಕದಂತೆ ಯಾವಾಗಲೂ ಛಾವಣಿಯ ಕೆಳಗೆ ನಿಮ್ಮ ಬೈಕ್ ನಿಲ್ಲಿಸಿ. ಇದರಿಂದ ಬೈಕ್ನ ಭಾಗಗಳಲ್ಲಿ ನೀರು ಸಂಗ್ರಹವಾಗುವುದನ್ನು ತಡೆಯಬಹುದು. ಒಂದು ವೇಳೆ ಛಾವಣಿ ಇರದಿದ್ದಲ್ಲಿ ಬೈಕ್ ಮೇಲೆ ಹೊದಿಸಲು ಒಂದು ವಾಟರ್ ಪ್ರೂಫ್ ಕವರ್ ಕೊಂಡುಕೊಳ್ಳಿ. ಇನ್ನು ಮಳೆ ಬರುತ್ತಿರುವಾಗ ಗಾಡಿ ಓಡಿಸಲು ಸ್ವಲ್ಪ ಹೆಚ್ಚಿನ ಅನುಭವ ಬೇಕಾಗುತ್ತದೆ. ಮಳೆಯಲ್ಲಿ ಗಾಡಿ ಓಡಿಸಲು ಆತ್ಮವಿಶ್ವಾಸ ಇರದಿದ್ದರೆ ಮಳೆ ಕಡಿಮೆಯಾಗುವವರೆಗೆ ಕಾಯುವುದು ಸೂಕ್ತ.
ನಿಮ್ಮ ಬೈಕನ್ನು ಮನೆಯೊಳಗೆ ಇರಿಸಿ: ನೀವು ನಿಮ್ಮ ಬೈಕ್ ಬಳಸದೇ ಇರುವಾಗ ಅದನ್ನು ಮನೆಯೊಳಗೆ ಇಟ್ಟುಕೊಳ್ಳಿ. ಇದರಿಂದ ನಿಮ್ಮ ಬೈಕನ್ನು ಮಳೆ ಮಾತ್ರವಲ್ಲದೆ ಬಿಸಿಲಿನಿಂದಲೂ ರಕ್ಷಿಸಬಹುದು. ಬೈಕ್ ಮನೆಯೊಳಗಡೆ ನಿಲ್ಲಿಸಿದಲ್ಲಿ ಅದು ಕಳುವಾಗುವ ಸಾಧ್ಯತೆಗಳೂ ಇರುವುದಿಲ್ಲ.
ತಗ್ಗು ಪ್ರದೇಶದ ರಸ್ತೆಗಳಲ್ಲಿ ಬೈಕ್ ನಿಲ್ಲಿಸಬೇಡಿ: ಮಳೆ ಬಂದಾಗ ನೀರು ಹೆಚ್ಚಾಗಿ ತಗ್ಗು ಪ್ರದೇಶಗಳಲ್ಲಿ ಸಂಗ್ರಹವಾಗುತ್ತದೆ. ಇಂಥ ಸಂದರ್ಭದಲ್ಲಿ ತಗ್ಗು ಪ್ರದೇಶಗಳಲ್ಲಿ ನಿಲ್ಲಿಸಿದ ಬೈಕ್ಗಳು ನೀರಿನ ಪ್ರವಾಹದಿಂದ ಕೊಚ್ಚಿಕೊಂಡು ಹೋಗಬಹುದು. ಹೀಗಾಗಿ ಅಂಥಲ್ಲಿ ಬೈಕ್ ನಿಲ್ಲಿಸಬಾರದು.